
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ವರದಿಯಾಗಿದ್ದು ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಮಹಿಳೆಯನ್ನು ವ್ಯಕ್ತಿಯೋರ್ವ ಬಲವಂತವಾಗಿ ತಬ್ಬಿ ಮುತ್ತಿಟ್ಟು, ಅಶ್ಲೀಲವಾಗಿ ವರ್ತಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಹೌದು.. ಬೆಂಗಳೂರಿನಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಚಿನ್ನದ ಸರ, ಮೊಬೈಲ್, ಪರ್ಸ್ ಕಳ್ಳತನದಂತಹ ಪ್ರಕರಣಗಳು ನಿತ್ಯ ವರದಿಯಾಗುತ್ತಿದ್ದು, ಇದರ ಜೊತೆಗೇ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಕೂಡ ರಾಜಧಾನಿಯ ಹೆಸರಿಗೆ ಕಪ್ಪುಚುಕ್ಕೆಯಾಗುತ್ತಿದೆ.
ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಬೆಂಗಳೂರಿನಲ್ಲಿ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದ ಮಹಿಳೆ ಮೇಲೆ ಕಾಮುಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ವರದಿಯಾಗಿದೆ.
ಬೆಂಗಳೂರಿನ ಕೋಣನಕುಂಟೆಯ (Konanakunte) ಕೃಷ್ಣಾ ನಗರದಲ್ಲಿ ಮನೆ ಬಳಿ ವಾಕಿಂಗ್ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ದುಷ್ಕರ್ಮಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಯು ಮನೆಯ ಬಳಿ ವಾಕಿಂಗ್ ಮಾಡುತ್ತಿದ್ದಾಗ ದುಷ್ಕರ್ಮಿಯೊಬ್ಬ ಆಕೆ ಬಳಿ ಬಂದು ಆಕೆಯನ್ನು ತಬ್ಬಿಕೊಂಡು ಬಲವಂತವಾಗಿ ಮುತ್ತಿಟ್ಟಿದ್ದಾನೆ.
ಈ ವೇಳೆ ಮಹಿಳೆ ಆತನಿಂದ ತಪ್ಪಿಸಿಕೊಂಡು ಮುಂದೆ ಹೋಗಿದ್ದು, ಮತ್ತೆ ಆಕೆಯನ್ನು ಹಿಂಬಾಲಿಸಿದ ಆತ ಮತ್ತೆ ಆಕೆಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಮಹಿಳೆ ಕಿರುಚಿಕೊಂಡಿದ್ದು, ಕೂಡಲೇ ಆತ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ಇವಿಷ್ಟೂ ಘಟನೆ ಮನೆಯೊಂದಕ್ಕೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬೆಚ್ಚಿಬಿದ್ದ ಮಹಿಳೆ
ಇನ್ನು ಮನೆ ಮುಂದೆ ಸೇಫ್ ಎಂದು ವಾಕಿಂಗ್ ಮಾಡುತ್ತಿದ್ದ ಮಹಿಳೆ ಈ ಘಟನೆ ಬಳಿಕ ತೀವ್ರ ಆತಂಕಗೊಂಡಿದ್ದಾರೆ. ಮಹಿಳೆಯು ಉತ್ತರ ಭಾರತದವರಾಗಿದ್ದು, ಬೆಳಗ್ಗೆ ಕೆಲ ಹೆಣ್ಣುಮಕ್ಕಳು ಸೇರಿ ವಾಕಿಂಗ್ ಹೋಗುತ್ತಿದ್ದರು. ಪಕ್ಕದ ಮನೆಯವರು ಬರುವ ಕಾರಣ ಅವರು ರಸ್ತೆ ಬದಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
Advertisement