ಮಂಗಳೂರು: ಮಂಗಳೂರಿನ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 39 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಸ್ಥಳೀಯ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.
ಹಿಂದೂ ಜಾಗರಣಾ ವೇದಿಕೆ ಮುಖಂಡ ಸುಭಾಷ್ ಪಡೀಲ್, ಮತ್ತಿತರ ಸಂಘಟನೆಯ ಸದಸ್ಯರನ್ನು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್ ವಿ ಕಾಂತರಾಜು ಖುಲಾಸೆಗೊಳಿಸಿದ್ದಾರೆ.
ಆರೋಪಿಗಳು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಘಟನೆಯ ವಿಡಿಯೋಗಳು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ನಂತರ ಘಟನೆ ರಾಷ್ಟ್ರ ಗಮನ ಸೆಳೆದಿತ್ತು.
ಏನಿದು ಘಟನೆ? 12 ವರ್ಷಗಳ ಹಿಂದೆ, ಜುಲೈ 28, 2012 ರಂದು 13 ಕಾಲೇಜು ವಿದ್ಯಾರ್ಥಿಗಳು ಪಡೀಲ್ ಜಂಕ್ಷನ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ತಮ್ಮ ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದಾಗ ಸುಭಾಷ್ ನೇತೃತ್ವದ 40 ಬಲಪಂಥೀಯ ಕಾರ್ಯಕರ್ತರ ಗುಂಪು ಮೂವರು ವಿಡಿಯೋ ಪತ್ರಕರ್ತರೊಂದಿಗೆ ಹೋಂ ಸ್ಟೇ ಮೇಲೆ ದಾಳಿ ನಡೆಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರಾದ ನವೀನ್ ಸೂರಿಂಜೆ, ಶರಣ್ ರಾಜ್ ಸೇರಿದಂತೆ 44 ಮಂದಿಯನ್ನು ಬಂಧಿಸಿದ್ದ ನಗರ ಪೊಲೀಸರು ಅವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ತದನಂತರ 2018 ರ ಜನವರಿಯಲ್ಲಿ ಸೂರಿಂಜೆ ಅವರನ್ನು ಖುಲಾಸೆಗೊಳಿಸಲಾಗಿತ್ತು. ಮೂವರು ಆರೋಪಿಗಳು ಸಾವನ್ನಪ್ಪಿದ್ದರೆ, ಅಪ್ರಾಪ್ತ ಆರೋಪಿಯನ್ನು ಬಾಲನ್ಯಾಯ ಮಂಡಳಿಯು ಖುಲಾಸೆಗೊಳಿಸಿತು.
ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಯುವಕರ ಮೇಲೆ ಹಲ್ಲೆ ನಡೆಸಿ, ಕೆಲವು ಯುವತಿಯರ ಬಟ್ಟೆಗಳನ್ನು ಹರಿದು ಹಾಕಿ, ಅನುಚಿತವಾಗಿ ವರ್ತಿಸಿದ್ದರು. ಕೊಠಡಿಯೊಳಗೆ ಅರೆಬಟ್ಟೆಯಲ್ಲಿದ್ದ ಯುವಕರೊಂದಿಗೆ ಕೆಲವು ಯುವತಿಯರನ್ನು ಬಲವಂತವಾಗಿ ಕೂರಿಸಿ, ವೀಡಿಯೊ, ಫೋಟೋಗಳನ್ನು ತೆಗೆದು ಮಾನಸಿಕ ಹಿಂಸೆ ಕೊಟ್ಟಿದ್ದರು ಎಂದು ಸಂತ್ರಸ್ತೆಯರು ಆರೋಪಿಸಿದ್ದರು. ಇದರಲ್ಲಿ ಇಬ್ಬರು ಸಂತ್ರಸ್ತೆಯರು ಪೊಲೀಸ್ ಅಧಿಕಾರಿಗಳ ಪುತ್ರಿಯರಾಗಿದ್ದಾರೆ.
39 ಆರೋಪಿಗಳು ವಿಚಾರಣೆ ಎದುರಿಸಿದರು ಆದರೆ, ಇದೀಗ ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ಪರ ವಕೀಲರಾದ ಶಂಭು ಶರ್ಮಾ, ಕಿಶೋರ್ ಕುಮಾರ್ ಮತ್ತಿತರರು ವಾದ ಮಂಡಿಸಿದರು.
Advertisement