ಬೆಂಗಳೂರು: ಮೆಜೆಸ್ಟಿಕ್‌ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ‍್ರದೇಶದಲ್ಲಿ ಜುಲೈ 3ರಂದು ಶವವಾಗಿ ಪತ್ತೆಯಾಗಿದ್ದ 5 ವರ್ಷದ ಬಾಲಕಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಬಾಲಕಿಯನ್ನು ಮರಿಯಮ್ ಎಂದು ಗುರ್ತಿಸಲಾಗಿತ್ತು. ಶಿವು ಎಂಬುವವರು ತಮ್ಮ ಪುತ್ರಿ ಎಂದು ಗುರ್ತಿಸಿದ್ದರು. ಅಲ್ಲದೆ, ಬಾಲಕಿಯನ್ನು ರಾಜಾ ಅಲಿಯಾಸ್ ಮಣಿಕಂಠ ಮತ್ತು ಹೀನಾ, ಅಲಿಯಾಸ್ ಕಾಳಿ ಹತ್ಯೆ ಮಾಡಿದ್ದು, ಇವರ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. ಇಬ್ಬರ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 103 ಮತ್ತು 208 ರ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಆದರೆ, ದೂರು ನೀಡಿದ್ದ ಶಿವು ಅವರ ಪುತ್ರಿ ಜೀವಂತವಾಗಿದ್ದು, ಕೋಲಾರದಲ್ಲಿ ಪತ್ತೆಯಾಗಿದ್ದಾಳೆ. ಹೀಗಾಗಿ, ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾದ ಬಾಲಕಿಯ ಶವದ ಕುರಿತು ಮತ್ತೆ ನಿಗೂಢತೆಗಳು ಮುಂದುವರೆದಿದೆ.
ದೂರು ಕೊಟ್ಟ ಶಿವು ಅವರ ಪುತ್ರಿ ಜೀವಂತವಾಗಿದ್ದಾಳೆಂದು ಜಿಆರ್‌ಪಿಯ ಉಪ ಪೊಲೀಸ್ ಮಹಾನಿರೀಕ್ಷಕ ಎಸ್‌ಡಿ ಶರಣಪ್ಪ ಅವರು ಹೇಳಿದ್ದಾರೆ.
ಮೃತ ಬಾಲಕಿಯನ್ನು ಇವರ ಪುತ್ರಿಯೇ ಎಂದು ತಪ್ಪಾಗಿ ಗುರ್ತಿಸಲಾಗಿತ್ತು. ಇಬ್ಬರೂ ಬಾಲಕಿಯರೂ ಒಂದೇ ರೀತಿ ಹೋಲಿಕೆಯನ್ನು ಹೊಂದಿದ್ದಾರೆಂದು ತಿಳಿಸಿದ್ದಾರೆ. ಈ ಬೆಳವಣಿಗೆ ಬಳಿಕ ಇದೀಗ ಅಪರಿಚಿತ ಶವ ಪ್ರಕರಣದ ತನಿಖೆಯು ಮತ್ತೆ ಮೊದಲ ಹಂತಕ್ಕೆ ಬಂದು ನಿಂತಿದೆ.
Advertisement