ಬೆಂಗಳೂರು: ಬೆಂಗಳೂರು ಮತ್ತು ಧಾರವಾಡದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗಳ ಮೇಲೆ ಶುಕ್ರವಾರ ನಡೆಸಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ದಾಳಿ, ಶನಿವಾರವೂ ಮುಂದುವರೆದಿತ್ತು.
ಭೂ ಸ್ವಾಧೀನ ಹೆಸರಲ್ಲಿ ಕೆಐಇಡಿಬಿ ಅಧಿಕಾರಿಗಳು ನೂರಾರು ಕೋಟಿ ಲೂಟಿ ಮಾಡಿದ ಆರೋಪ ಕೇಳಿಬಂದಿತ್ತು. ಒಂದೇ ಭೂಮಿಗೆ ಎರಡೆರಡು ಬಾರಿ ಪರಿಹಾರ ನೀಡುವ ನೆಪದಲ್ಲಿ ಹಣಕಾಸಿನ ಅಕ್ರಮ, ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿ ಕಾಸು ಲಪಟಾಯಿಸಿರುವುದು ಕಂಡುಬಂದಿತ್ತು.
IDBI ಬ್ಯಾಂಕ್‌ನ ಒಂದೇ ಶಾಖೆಯಲ್ಲಿ 24 ನಕಲಿ ಖಾತೆಗಳನ್ನು ತೆರೆದು ಹಣ ಕಳುಹಿಸಲಾಗಿತ್ತು. ಹುಬ್ಬಳ್ಳಿ ವಿಮಾನ ನಿಲ್ದಾಣದ ಭೂ ಸ್ವಾಧೀನದ ಹೆಸರಲ್ಲಿ, ಧಾರವಾಡ ಕೆಲಗೇರಿ ಹಾಗು ಮುಮ್ಮಿಗಟ್ಟಿ ಗ್ರಾಮಗಳಲ್ಲಿ ಭೂ ಸ್ವಾಧೀನ ಹೆಸರಲ್ಲಿಯೂ ಲೂಟಿ ಮಾಡಿರುವುದು ಕಂಡು ಬಂದಿತ್ತು.
ಆರೋಪ ಹಿನ್ನೆಲೆಯಲ್ಲಿ ಆರ್ ಆರ್ ನಗರದಲ್ಲಿರುವ ಟೆಂಪಲ್ ಬೆಲ್ ಅಪಾರ್ಟ್ಮೆಂಟ್ ನಲ್ಲಿ ವಾಸವಿರುವ ವಾಣಿ ನಿವಾಸ ಹಾಗೂ ಕಚೇರಿ ಮೇಲೆ ಇಡಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದರು. ಬಳಿಕ ಬೆಂಗಳೂರಿನ ಖನಿಜ ಭವನದಲ್ಲಿರುವ ಕೆಐಎಡಿಬಿ ಪ್ರಧಾನ ಕಚೇರಿ ಮೇಲೂ ದಾಳಿ ನಡೆಸಿತು. ಇದರ ಬೆನ್ನಲ್ಲೇ ಶನಿವಾರ ಕೆಐಎಡಿಬಿಯ ಧಾರವಾಡ ಕಚೇರಿಯ ಮೇಲೂ ದಾಳಿ ನಡೆಸಿದ ಅಧಿಕಾರಿಗಳು ದಾಖಲೆ ಹಾಗೂ ಕಡತಗಳನ್ನು ಪರಿಶೀಲನೆ ನಡೆಸಿದರು.
ಮೂಲಗಳ ಪ್ರಕಾರ, ಧಾರವಾಡದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಬ್ಬರು ನೀಡಿದ ದೂರಿನ ಮೇರೆಗೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಆರೋಪಕ್ಕೆ ಸಂಬಂಧಿಸಿದಂತೆ 2022 ಮತ್ತು 2023 ರಲ್ಲಿಯೇ ಧಾರವಾಡದಲ್ಲಿ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿದ್ದು, ನಾಲ್ಕರ ಪೈಕಿ ಒಂದು ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು, ಉಳಿದ ಪ್ರಕರಣಗಳನ್ನು ಸ್ಥಳೀಯ ಪೊಲೀಸರ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
Advertisement