
ಬೆಂಗಳೂರು: ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಸಂಘಟಿತ ದಾಳಿಗೆ ಬ್ರಿಟನ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿರುವ ಡಾ.ನೀರಜ್ ಪಾಟೀಲ್ ಅವರು ಖಂಡನೆ ವ್ಯಕ್ತಪಡಿಸಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬೆಂಗಳೂರಿಗೆ ಭೇಟ ನೀಡಿರುವ ನೀರಜ್ ಪಾಟೀಲ್ ಅವರು ವಿದೇಶಾಂಗ ಕಚೇರಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಉಚ್ಛಾಟಿತ ಪ್ರಧಾನಿ ಶೇಖ್ ಹಸೀನಾ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆಯೂ ಒತ್ತಾಯಿಸಿದ್ದಾರೆ.
ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಅವರಿಗೂ ಪತ್ರ ಬರೆದು ಬಾಂಗ್ಲಾದೇಶದಲ್ಲಿರುವ ಶೇ.8ರಷ್ಟು ಹಿಂದೂ ಅಲ್ಪಸಂಖ್ಯಾತರು ಮತ್ತು ಇತರೆ ಜನಾಂಗದ ಜನರಿಗೂ ಸುರಕ್ಷತೆ ಖಚಿತಪಡಿಸುವಂತೆ ಒತ್ತಾಯಿಸಲಾಗಿದೆ ಎಂದು ನೀರಜ್ ಪಾಟೀಲ್ ಅವರು ಹೇಳಿದ್ದಾರೆ.
ಈ ಹಿಂದೆ ಬ್ರಿಟನ್ ಸರ್ಕಾರ ಶೇಖ್ ಹಸೀನಾ ಅವರಿಗೆ ಆಶ್ರಯ ನೀಡಲು ನಿರಾಕರಿಸಿದ್ದು, ಆದರೆ, ಹಿಂದೂಸ್ ಫಾರ್ ಲೇಬರ್ ಸದಸ್ಯರು, ಶೇಖ್ ಹಸೀನಾ ಆವರಿಗೆ ಆಶ್ರಯ ನೀಡುವುದು ಬಾಂಗ್ಲಾದೇಶದಲ್ಲಿ ಹಿಂದೂಗಳ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಸಲಹೆ ನೀಡಿದ್ದರು.
ಹಸೀನಾ ಅವರ ಸಹೋದರಿ ಶೇಖ್ ರೆಹಾನಾ ಅವರು ಬ್ರಿಟಿಷ್ ಪ್ರಜೆಯಾಗಿದ್ದು, ಅವರ ಸೋದರ ಸೊಸೆ ಟುಲಿಪ್ ಸಿದ್ದಿಕ್ ಬ್ರಿಟನ್ ನಲ್ಲಿ ಆರ್ಥಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement