ಮಂಗಳೂರು: ಸಕಲೇಶಪುರ ಮತ್ತು ಬಾಳ್ಳುಪೇಟೆ ಮಾರ್ಗ ಮಧ್ಯೆ ಶನಿವಾರ ಸಂಭವಿಸಿದ ಭೂಕುಸಿತದಿಂದಾಗಿ ರೈಲು ಸಂಚಾರ ಸ್ಥಗಿತಗೊಂಡ ಪರಿಣಾಮ ರಾಜಸ್ಥಾನದ ಮೂಲದ ಯುವಕ ರೋಹಿತ್ ಸಿಂಗ್ ರಾವತ್ ಅವರ ಭಾರತೀಯ ವಾಯುಸೇನೆ ಸೇರುವ ಕನಸು ನುಚ್ಚುನೂರಾಗಿದೆ.
ರೋಹಿತ್ ಸಿಂಗ್ ರಾವತ್ ಅವರು ರೈಲು ಸಂಖ್ಯೆ 16511ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಶನಿವಾರ ಪ್ರಯಾಣಿಸುತ್ತಿದ್ದರು. ಈ ನಡುವೆ ಸಕಲೇಶಪುರ ಮತ್ತು ಬಾಳ್ಳುಪೇಟೆ ರೈಲ್ವೆ ನಿಲ್ದಾಣದ ಮಧ್ಯೆ ಭೂಕುಸಿತ ಹಿನ್ನೆಲೆ ರೈಲು ಮಂಗಳೂರು ತಲುಪಲು ಸಾಧ್ಯವಾಗಿಲ್ಲ.
ರೋಹಿತ್ ಭಾರತೀಯ ವಾಯುಸೇನೆಯ ಸರ್ವೀಸ್ ಸೆಲೆಕ್ಷನ್ ಬೋರ್ಡ್ ವಿಭಾಗದಲ್ಲಿ ಅವರು ತೇರ್ಗಡೆಯಾಗಲು ಸಾಕಷ್ಟು ಶ್ರಮಪಟ್ಟಿದ್ದರು. ಈ ಬಾರಿ ಅವರು ತನ್ನ ಕೊನೆಯ ಪ್ರಯತ್ನ ನಡೆಸಿ, ವಾಯುಸೇನೆ ಸೇರಲು ಬೇಕಾಗಿರುವ ಏರ್ ಫೋರ್ಸ್ ಕಾಮನ್ ಅಡ್ಮಿಶನ್ ಟೆಸ್ಟ್ ಬರೆಯಲು ಸಿದ್ಧರಾಗಿದ್ದರು. ಇದರಂತೆ ಭಾನುವಾರ ಬೆಳಗ್ಗೆ 8.30ಕ್ಕೆ ಮಂಗಳೂರಿನ ಶಾರದಾನಿಕೇತನಕ್ಕೆ ಬರುವವರಿದ್ದರು. ಆದರೆ, ಭೂಕುಸಿತವು ಅವರ ಕನಸು ಕಮರುವಂತೆ ಮಾಡಿದೆ.
ರೈಲು ಬೆಳಿಗ್ಗೆ 6.30ಕ್ಕೆ ಮಂಗಳೂರು ತಲುಪಬೇಕಿತ್ತು. ಆದರೆ, 5.30 ಆದರೂ ಹಾಸನದ ಆಲೂರಿನಲ್ಲೇ ನಿಲುಗಡೆಯಾಗಿತ್ತು. ಇದರಿಂದ ಗಾಬರಿಗೊಂಡ ರೋಹಿತ್ ರೈಲ್ವೇ ಪೊಲೀಸರನ್ನು ವಿಚಾರಿಸಿದ್ದು, ಇನ್ನೂ 15-30 ನಿಮಿಷ ತಡವಾಗುತ್ತದೆ ಎಂದು ಹೇಳಿದ್ದಾರೆ.
ಅಷ್ಟು ಸಮಯ ಕಾದರೂ ರೈಲು ಸಂಚರಿಸುವ ಲಕ್ಷಣಗಳು ಕಾಣಿಸಲಿಲ್ಲ. ಬಳಿಕ ಬಸ್ ನಲ್ಲಿ ಬೆಂಗಳೂರಿಗೆ ವಾಪಸ್ಸಾದೆ ಎಂದು ರೋಹಿತ್ ಹೇಳಿದ್ದಾರೆ.
ಬಸ್ ನಲ್ಲಿ ಸಂಚರಿಸಿದ್ದರೂ ಸಮಯಕ್ಕೆ ಸರಿಯಾಗಿ ಮಂಗಳೂರು ತಲುಪಲು ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ ಆಲೂರಿನಿಂದ ಮಂಗಳೂರಿಗೆ ತಲುಪಲು 4-5 ಗಂಟೆ ಸಮಯ ಬೇಕು.
ರೋಹಿತ್ ಅವರ ತಂದೆ ಭಾರತೀಯ ನೌಕಾಪಡೆಯಲ್ಲಿದ್ದರು. ಅವರ ಸಹೋದರ ವಾಣಿಜ್ಯ ನೌಕಾಪಡೆಯಲ್ಲಿದ್ದರು. ಹೀಗಾಗಿ ತಾವೂ ಕೂಡ ವಾಯುಸೇನೆಗೆ ಸೇರುವುದು ರೋಹಿತ್ ಅವರ ಬಾಲ್ಯದ ಕನಸಾಗಿತ್ತು. ಇದು 6ನೇ ಮತ್ತು ಅಂತಿಮ ಪರೀಕ್ಷೆಯಾಗಿತ್ತು.
ನಾನು ಶೀಘ್ರದಲ್ಲೇ 24 ವರ್ಷಕ್ಕೆ ಕಾಲಿಡುತ್ತಿದ್ದೇನೆ. ನಂತರ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಪರೀಕ್ಷೆಗೆ ಉತ್ತಮ ರೀತಿಯಲ್ಲಿ ಸಿದ್ಧತೆ ನಡೆಸಿದ್ದೆ. ಈ ಬಾರಿ ತೇರ್ಗಡೆಯಾಗುವ ವಿಶ್ವಾಸವಿತ್ತು. 5 ಬಾರಿಯ ಪರೀಕ್ಷೆಯಲ್ಲಿ ಮೂರು ಬಾರಿ ತೇರ್ಗಡೆಯಾಗಿದ್ದೆ. ಆದರೆ, SSB ಪರೀಕ್ಷೆಯಲ್ಲಿ ತೇರ್ಗಡೆ ಸಾಧ್ಯವಾಗಿರಲಿಲ್ಲ. ರೈಲಿನಲ್ಲಿ ನಾನೊಬ್ಬನೇ ಅಲ್ಲ, ನನ್ನೊಂದಿಗೆ ಇನ್ನೂ 5-6 ಆಕಾಂಕ್ಷಿಗಳಿದ್ದರು. ಇದೀಗ ಅವರೆಲ್ಲರ ಕನಸು ನುಚ್ಚುನೂರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಪೋಸ್ಟ್ ಹಾಕಿರುವ ರೋಹಿತ್, ಪ್ರಧಾನಿ ಮೋದಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಐಎಎಫ್ ಮತ್ತು ಇತರೆ ಅಧಿಕಾರಿಗಳಿಗೆ ಟ್ಯಾಗ್ ಮಾಡಿ, ಅಳಲು ತೋಡಿಕೊಂಡಿದ್ದಾರೆ.
Advertisement