ಬೆಂಗಳೂರು: ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪರೇಡ್ ಮೈದಾನವು ಅದ್ಧೂರಿ ಸ್ವಾತಂತ್ರ್ಯ ದಿನಾಚರಣೆಗೆ ಸಂಪೂರ್ಣ ಸಿದ್ಧಗೊಂಡಿದೆ.
ಈ ಬಾರಿ 400 ಮಂದಿ ಶಾಲಾ ಮಕ್ಕಳಿಂದ ‘ಕಾಂಗ್ರೆಸ್ ಸರ್ಕಾರದ ಐದು ಮಹತ್ವಾಕಾಂಕ್ಷೆ ಖಾತ್ರಿ ಯೋಜನೆ’ ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಳೆದ ಮೂರು ದಿನಗಳಿಂದ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮಗಳ ತಾಲೀಮು ನಡೆಯುತ್ತಿದೆ. ಈ ಬಾರಿ ಸುಮಾರು 8,000 ಜನರು ಭಾಗವಹಿಸಲಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
35 ತಂಡಗಳಿಂದ ಅಂತಿಮ ತಾಲೀಮು ನಡೆಸಲಾಯಿತು. ನಾಡ ಗೀತೆ, ರೈತ ಗೀತೆ ಹಾಗೂ ಮೋಟಾರ್ ಸೈಕಲ್ ಸಾಹಸ ತಂಡದ ಪ್ರದರ್ಶನಕ್ಕೆ ರಿಹರ್ಸಲ್ ನಡೆಯಿತು.
ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗುರುವಾರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪರೇಡ್ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದ ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ಮಾತನಾಡಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಶ್ರೀಪಾದ ದೇವರಾಜ್ ಮತ್ತು ತಂಡದಿಂದ ನಾಡಗೀತೆ ಹಾಗೂ ರೈತ ಗೀತೆ
750 ಶಾಲಾ ಮಕ್ಕಳಿಂದ "ಜಯಭಾರತಿ" ನೃತ್ಯ ನಾಟಕ
700 ಶಾಲಾ ಮಕ್ಕಳಿಂದ ರಾಣಿ ಅಬ್ಬಕ್ಕ ದೇವಿ ನಾಟಕ
ಮಲ್ಲಕಂಬ
ಕಳರಿಪಯಟ್ಟು
ಪ್ಯಾರಾ ಮೋಟಾರ್
ಮೋಟಾರ್ ಸೈಕಲ್ ಶೋ
ಸಾರ್ವಜನಿಕರಿಗೆ 3 ಸಾವಿರ ಆಸನ, ಅತಿ ಗಣ್ಯ ವ್ಯಕ್ತಿಗಳಿಗೆ 2 ಸಾವಿರ ಆಸನ, ಸ್ವಾತಂತ್ರ್ಯ ಹೋರಾಟಗಾರರಿಗೆ, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 750, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗೆ 2 ಸಾವಿರ ಆಸನ ಸೇರಿ ಒಟ್ಟು ಎಂಟು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದರು.
Advertisement