
ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಜೊತೆ ನಿಂತಿದ್ದ ದೇಶದ್ರೋಹಿಗಳು, ಅಧಿಕಾರ ಸಿಕ್ಕ ಕೂಡೇ ಇದೀಗ ದೇಶ ಭಕ್ತಿಯ ಪಾಠ ಮಾಡುತ್ತಿದ್ದಾರೆ. ಇದು ನಿಜಕ್ಕೂ ದುರಂತ ಎಂದು ಬಿಜೆಪಿ ವಿರುದ್ಧ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
78ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಾಣ ನೆರವೇರಿಸಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು.
ರಾಜ್ಯದ ಜನತೆಯನ್ನು ಹಸಿವಿನಿಂದ ಮುಕ್ತ ಮಾಡಬೇಕು ಎನ್ನುವುದೇ ನಮ್ಮ ಗುರಿ. ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಕಾಲದಲ್ಲಿ ಕೊಟ್ಟ ಕಾರ್ಯಕ್ರಮಗಳು ಜನರದ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದೆ. ಕಾಂಗ್ರೆಸ್'ಗೆ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಜಾರಿ ಮಾಡಲು ಸಾಧ್ಯ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸ್ವಾತಂತ್ರ್ಯ ಎಂದರೆ ಬೆಲೆಕಟ್ಟಿ ಪಡೆಯುವ ವಸ್ತವಲ್ಲ. ಅದು ನಮ್ಮ ಉಸಿರು. ಇದನ್ನು ಮಹತ್ಮಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಈ ದೇಶಕ್ಕೆ ಸ್ವಾತಂತ್ರ ತಂದ ಪಕ್ಷ. ಈ ಪಕ್ಷದಲ್ಲಿ ಇದ್ದೇವೆ ಅನ್ನುವುದೇ ಒಂದು ರೀತಿಯಲ್ಲಿ ನಮಗಿರುವ ಹೆಮ್ಮೆಯಾಗಿದೆ.
ಜವಹರಲಾಲ್ ನೆಹರು, ವಲ್ಲಭಭಾಯಿ ಪಟೇಲ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂಬ ಸುಳ್ಳು ಸುದ್ದಿ ಗಮನಿಸಿದ್ದೇವೆ. ಈ ಹೋರಾಟಕ್ಕಾಗಿ 6.50 ಲಕ್ಷ ಜನ ಕಾಂಗ್ರೆಸ್ಸಿಗರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೇಶದಲ್ಲಿ ಅನೇಕ ನಕಲಿ ದೇಶ ಭಕ್ತರು ಇದ್ದಾರೆ. ಅದರ ನಡುವೆ ನಮ್ಮ ಹಿರಿಯರು ನಮ್ಮತನವನ್ನು ಉಳಿಸಿದ್ದಾರೆ. ಸ್ವಾತಂತ್ರ ಹೋರಾಟದ ಮೊದಲು ಕಿಚ್ಚು ಹಚ್ವಿದ್ದೇ ಕರ್ನಾಟಕ. ನೂರು ವರ್ಷಗಳ ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿ ಮಹತ್ಮಾ ಗಾಂಧಿ ಕರ್ನಾಟಕದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಗಾಂಧೀಜಿ ಅವರು ಕಾಂಗ್ರೆಸ್‌ನ ಅಧಿಕಾರ ವಹಿಸಿಕೊಂಡು 100 ವರ್ಷ ಆಗಿದೆ. ಇದಕ್ಕಾಗಿ ಸರ್ಕಾರ ಮತ್ತು ಪಕ್ಷ ಎರಡೂ ಸೇರಿ ವಿವಿಧ ಕಾರ್ಯಕ್ರಮ ರೂಪಿಸಲಿದೆ.
ಈ ದಿನವನ್ನು ಸ್ಮರಿಸಲು ಕೆಲಸ ಮಾಡುತ್ತಿದ್ದೇವೆ. ಇಡೀ ವರ್ಷ ಕಾರ್ಯಕ್ರಮಕ್ಕೆ ಕರೆ ಕೊಟ್ಟಿದ್ದೇವೆ. ಅದಕ್ಕಾಗಿ ಒಂದು ಕಮಿಟಿ ರಚಿಸಿದ್ದೇವೆ. ಸಾರ್ವಜನಿಕ ವಲಯ ಕಟ್ಟಿ ಬೆಳಸಿದ್ದು ಕಾಂಗ್ರೆಸ್ ಪಕ್ಷ. ಅಂದು ಬ್ರಿಟಿಷರ ಪರ ನಿಂತಿದ್ದವರನ್ನು ಇಂದು ತಿರಸ್ಕಾರ ಮಾಡಬೇಕಿದೆ. ಕ್ವಿಟ್ ಇಂಡಿಯಾ ಚಳುವಳಿ ಹತ್ತಿಕ್ಕಲು ಶ್ಯಾಮ್ ಪ್ರಸಾದ್ ಮುಖರ್ಜಿ ಪತ್ರ ಬರೆದಿದ್ದರು.
ದೇಶಕ್ಕೆ ಕಾಂಗ್ರೆಸ್‌ನ ಕೊಡುಗೆ ಏನು ಎಂದು ಹಲವರು ಕೇಳುತ್ತಾರೆ. ಆದರೆ, ದೇಶಕ್ಕಾಗಿ ಕಾಂಗ್ರೆಸ್ ಕೊಡುಗೆ ನೀಡಿದ ಸಂಸ್ಥೆಗಳನ್ನು ಅವರೇ ಮಾರಾಟ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ದೇಶದ್ರೋಹಿಗಳ ಪರವಾಗಿ ನಿಂತು ದೇಶಪ್ರೇಮ ಪಾಠ ಮಾಡುವವರು ನಮ್ಮ ನಡುವೆ ಇದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
Advertisement