ಕಲಬುರಗಿ: ಯಾದಗಿರಿ ನಗರ ಠಾಣೆಯ ಮೃತ ಪಿಎಸ್‌ಐ ಪರಶುರಾಮ್ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಟ ಚೇತನ್ ಅಹಿಂಸಾ ಅವರು ಆಗ್ರಹಿಸಿದ್ದಾರೆ.
ಪರಶುರಾಮ್ ಅವರ ಸಹೋದರ ಹನುಮಂತ್ ಅವರ ನೇತೃತ್ವದಲ್ಲಿ ನಿನ್ನೆಯಷ್ಟೇ ಯಾದಗಿರಿಯಲ್ಲಿ ಬೃಹತ್ ಸಮಾವೇಶ ನಡೆಯಿತು.
ಯಾದಗಿರಿ ನಗರದ ಮೈಲಾಪುರ ಅಗಸಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿ ಚೌಕ್, ಕನಕ ವೃತ್ತ, ಅಂಬೇಡ್ಕರ್ ಚೌಕ್, ಸುಭಾಷ್ ಚಂದ್ರ ಬೋಸ್ ವೃತ್ತದ ಮೂಲಕ ಶಾಸಕರ ಕಚೇರಿ ತಲುಪಿತು. ಸುಭಾಷ್ ಚಂದ್ರ ಬೋಸ್ ವೃತ್ತದ ಬಳಿ ಕೆಲ ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಟ ಚೇತನ್ ಅಹಿಂಸಾ ಅವರು, ಯಾದಗಿರಿ ಶಾಸಕ ಕಾಂಗ್ರೆಸ್ ಪಕ್ಷದವರಾಗಿರುವುದರಿಂದ ಸರ್ಕಾರ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆಗಳಿವೆ. ಹೀಗಾಗಿ ನಾವು ಸಿಐಡಿ ತನಿಖೆಯನ್ನು ನಂಬುವುದಿಲ್ಲ. ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಯಾದಗಿರಿ ಶಾಸಕರ ಜೊತೆಗೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿದ್ದಾರೆ. ಆದರೂ, ಶಾಸಕರು ಕುಟುಂಬಸ್ಥರೊಂದಿಗೆ ಮಾತನಾಡಿಲ್ಲ. ಘಟನೆ ನಡೆದು ಎರಡು ವಾರ ಕಳೆದರೂ ತನಿಖಾ ಸಂಸ್ಥೆ ಎಫ್‌ಐಆರ್‌ನಲ್ಲಿ ಹೆಸರಿಸಿರುವ ಆರೋಪಿಗಳನ್ನು ಬಂಧಿಸಿಲ್ಲ ಅಥವಾ ವಿಚಾರಣೆ ನಡೆಸಿಲ್ಲ. ಸಿಐಡಿ ಅಧಿಕಾರಿಗಳು ಇದುವರೆಗೆ ಮೃತ ಪಿಎಸ್‌ಐ ಕುಟುಂಬದ ಸದಸ್ಯರಿಂದ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ ಎಂದು ಹೇಳಿದರು.
ಈ ನಡುವೆ ಪ್ರತಿಭಟನಾ ನಿರತರು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಯಾದಗಿರಿ ಜಿಲ್ಲಾಧಿಕಾರಿ ಸುಶೀಲಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
Advertisement