ಬೆಂಗಳೂರು: ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದು, ರಾಜ್ಯಪಾಲರ ನಡೆಗೆ ಸಿದ್ದರಾಮಯ್ಯ ಸಂಪುಟದ ಸಚಿವರು ಸೇರಿದಂತೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೃಹ ಸಚಿವ ಡಾ ಜಿ ಪರಮೇಶ್ವರ, ಯಾವ ರೀತಿಯಲ್ಲಿ ಗವರ್ನರ್ ಅನುಮತಿ ಕೊಟ್ಟಿದ್ದಾರೆಂದು ಗೊತ್ತಿಲ್ಲ. ಕಾನೂನು ಹೋರಾಟ ಮಾಡುತ್ತೇವೆ. ಕೇಂದ್ರದಿಂದ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಒತ್ತಡ ಇರುವುದು ಸ್ಪಷ್ಟವಾಗುತ್ತಿದೆ. ರಾಜ್ಯಪಾಲರ ಭವನ ರಾಜಕೀಯ ನಿವಾಸವಾಗುತ್ತಿದೆ.
ಸಿಎಂ ಸಿದ್ದರಾಮಯ್ಯ ಮೌಖಿಕವಾಗಿ, ಪತ್ರ ವ್ಯವಹಾರ ಮಾಡಿಲ್ಲ. ಈ ಬಗ್ಗೆ ನಾವು ರಾಜ್ಯಪಾಲರಿಗೆ ಉತ್ತರ ಕೊಟ್ಟಿದ್ದೆವು. ನಾವು ಶೋಕಾಸ್ ನೋಟಿಸ್ಗೆ ಎಳೆ ಎಳೆಯಾಗಿ ಉತ್ತರ ಕೊಟ್ಟಿದ್ದೆವು. ಆದರೂ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯ ಷಡ್ಯಂತ್ರ: ನಮಗೆ ಕಾನೂನು ಹೋರಾಟ ಅನಿವಾರ್ಯವಾಗಿದೆ. ಮುಂದಿನ ಕಾನೂನು ರೂಪುರೋಷಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿರುವ ಗೃಹ ಸಚಿವರು ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ.
ಶೋಕಾಸ್ ನೋಟಿಸ್ ಕೊಟ್ಟಾಗಲೇ ಇದು ಷಡ್ಯಂತ್ರ ಎಂಬುದು ಗೊತ್ತಾಯ್ತು. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಬೇಕೆಂದು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ. ಬಿಜೆಪಿಯವರು ಸಂವಿಧಾನ ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ರಾಜಕೀಯ ಪ್ರೇರಿತ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸೈಟ್ ಹಂಚಿಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಗಿದ್ದಲ್ಲ. 20 ವರ್ಷಗಳ ಹಿಂದೆ ನಡೆದಿರುವುದು ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ: ಸರ್ಕಾರದಲ್ಲಿ ಇಂದು ಹೊಸ ಬೆಳವಣಿಗೆಗಳು ಆಗುತ್ತಿದ್ದಂತೆ ಬೆಂಗಳೂರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಿದ್ದಾರೆ. ಸಿದ್ದರಾಮಯ್ಯ ಮನೆಯಲ್ಲಿ ಸಚಿವರ ದಂಡು ಸೇರುತ್ತಿದೆ. ಮುಖ್ಯಮಂತ್ರಿಗಳ ದೆಹಲಿ ಪ್ರತಿನಿಧಿ ಟಿ. ಬಿ. ಜಯಚಂದ್ರ ಕೂಡ ಬೆಂಗಳೂರಿಗೆ ಆಗಮಿಸಿದ್ದು, ಇಂದೇ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement