ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ಸೈಟ್ ಪಡೆದ ಆರೋಪದ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಕರ್ನಾಟಕ ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ದಾಖಲಾಗಿದೆ.
ನಾಗರಭಾವಿ ನಿವಾಸಿಯಾದ ಹೈಕೋರ್ಟ್ ವಕೀಲ ಎಸ್.ಪಿ.ಪ್ರದೀಪ್ ಕುಮಾರ್ ಶನಿವಾರ ಈ ಕೇವಿಯಟ್ ಅರ್ಜಿ ಸಲ್ಲಿಸಿದ್ದು, ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇನಾದರೂ, ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದರೆ ಆಗ ನಮ್ಮ ವಾದ ಆಲಿಸದೆ ಯಾವುದೇ ಆದೇಶ ಮಾಡಬಾರದು ಎಂದು ಕೇವಿಯೆಟ್ ಅರ್ಜಿದಾರರು ಕೋರಿದ್ದಾರೆ.
ಹೈಕೋರ್ಟ್ ವಕೀಲ ಎಂ.ಎಚ್.ಪ್ರಕಾಶ್ ವಕಾಲತ್ತು ವಹಿಸಿದ್ದಾರೆ ಎಂದು ತಿಳಿದುಬಂದಿದೆ.
"ಮುಡಾ ಹಗರಣವನ್ನು ತನಿಖೆಗೆ ಒಳಪಡಿಸಲು ಆದೇಶಿಸಬೇಕು" ಎಂದು ಕೋರಿ ಎಸ್.ಪಿ.ಪ್ರದೀಪ್ ಕುಮಾರ್ ಈಗಾಗಲೇ "ಜನಪ್ರತಿನಿಧಿಗಳ ವಿಶೇಷ ಕೋರ್ಟ್" ನಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಮುಡಾದಲ್ಲಿ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ" ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು.
ಕೇವಿಯಟ್ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅರ್ಜಿದಾರ ಪ್ರದೀಪ್ ಕುಮಾರ್, ‘ಕಾನೂನು ಪ್ರಕಾರ ಸಿದ್ದರಾಮಯ್ಯ ಅವರು ಹೈಕೋರ್ಟ್‌ನ ಮೊರೆ ಹೋಗಬಹುದು, ಕೇವಿಯಟ್ ಇಲ್ಲದೇ ಹೋದರೆ ಅವರಿಗೆ ರಿಲೀಫ್ ಕೂಡ ಸಿಗಬಹುದು. ಹೀಗಾಗಿ, ನಾನು ಕೇವಿಯಟ್ ಸಲ್ಲಿಸಿದ್ದೇನೆ ಎಂದಿದ್ದಾರೆ.
ಕರ್ನಾಟಕ ಸರ್ಕಾರ ಅಥವಾ ಸಿಎಂ ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಮಂಜೂರಾತಿಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಕ್ರಮಗಳನ್ನು ಇನ್ನೂ ಕೈಗೊಂಡಿಲ್ಲ. ಅಂತೆಯೇ ಪ್ರಕರಣದ ಮತ್ತೊಬ್ಬ ದೂರುದಾರ ಟಿಜೆ ಅಬ್ರಹಾಂ ಅವರು ಕೂಡ ಸೋಮವಾರ ಕೇವಿಯಟ್ ಸಲ್ಲಿಸುವುದಾಗಿ ಹೇಳಿದ್ದಾರೆ.
Advertisement