
ಬೆಂಗಳೂರು: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನವಾಗಿದೆ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೆ, ಬೆಂಗಳೂರಿನ ಈ ಶಾಲೆಯ ವಿದ್ಯಾರ್ಥಿಗಳು ಮರಗಳಿಗೆ ರಾಖಿ ಕಟ್ಟುವ ಮೂಲಕ ಪ್ರಕೃತಿ ಹಾಗೂ ಮನುಷ್ಯರ ನಡುವೆ ಇರುವ ಪವಿತ್ರ ಬಂಧದ ಕುರಿತು ಜಾಗೃತಿ ಮೂಡಿಸಲು ಹೊರಟಿದ್ದಾರೆ.
ವರ್ತೂರಿನ ಮುತ್ತಸಂದ್ರದಲ್ಲಿರುವ ದಿ ಗ್ರೀನ್ ಸ್ಕೂಲ್ ಬೆಂಗಳೂರು (ಟಿಜಿಎಸ್‌ಬಿ) ಶಾಲೆಯ ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ರಾಖಿ ಗಳನ್ನು ತಯಾರಿಸಿದ್ದು, ‘ಮರಗಳನ್ನು ಉಳಿಸಿ, ಬೆಂಗಳೂರು ಉಳಿಸಿ’ ಅಭಿಯಾನದ ಅಡಿಯಲ್ಲಿ ರಕ್ಷಾ ಬಂಧನದ ದಿನದಂದು ಮರಗಳಿಗೆ ರಾಖಿಗಳನ್ನು ಕಟ್ಟಲಿದ್ದಾರೆ.
ತ್ಯಾಜ್ಯ ವಸ್ತುಗಳಿಂದ ದೊಡ್ಡ ದೊಡ್ಡ ರಾಖಿ ತಯಾರಿಸುವ ಮಾರ್ಗವನ್ನು ನಮ್ಮ ಶಿಕ್ಷಕರು ಹೇಳಿಕೊಟ್ಟರು. ಪಿಸ್ತಾಗಳ ಹೊರ ಪದರ, ಪೆನ್ಸಿಲ್ ತೊಗಟೆ, ಹಳೆಯ ಬಟ್ಟೆ ಮತ್ತು ಕಾರ್ನ್ ಕಾಬ್ ಗಳನ್ನು ಬಳಸಿ ರಾಖಿಗಳನ್ನು ಸಿದ್ಧಪಡಿಸಿದ್ದೇವೆಂದು 5ನೇ ತರಗತಿಯ ವಿದ್ಯಾರ್ಥಿ ಆಧ್ಯಾ ಹೇಳಿದ್ದಾರೆ.
ಕೇವಲ ಮರಗಳಿಗಷ್ಟೇ ಅಲ್ಲದೆ, ಮುತ್ತಸಂದ್ರದ ಸರ್ಕಾರಿ ಆಸ್ಪತ್ರೆ ಹಾಗೂ ಪಂಚಾಯಿತಿ ಕಚೇರಿಗೂ ಭೇಟಿ ನೀಡುವ ವಿದ್ಯಾರ್ಥಿಗಳು, ಅಲ್ಲಿನ ವಾರ್ಡನ್‌ಗಳಿಗೆ ರಾಖಿ ಕಟ್ಟುವ ಮೂಲಕ ಅವರ ನಿಸ್ವಾರ್ಥ ಸೇವೆಗೆ ಗೌರವ ಸೂಚಿಸಲಿದ್ದಾರೆ.
ದಿ ಗ್ರೀನ್ ಸ್ಕೂಲ್ ಬೆಂಗಳೂರು ಪ್ರಗತಿಪರ ಸುಸ್ಥಿರ ಅಭಿವೃದ್ಧಿ ಗುರಿ (SDG) ಹೊಂದಿರುವ ಶಾಲೆಯಾಗಿದ್ದು, ಸಾಮರಸ್ಯ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸಲು ಬದ್ಧವಾಗಿದೆ. ಈ ವಿಶಿಷ್ಟ ರಕ್ಷಾ ಬಂಧನದ ಮೂಲಕ, ನಮ್ಮ ನಗರದಲ್ಲಿ ಹಸಿರು ಹೊದಿಕೆಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಶಾಲೆಯ ಪ್ರಾಂಶುಪಾಲರಾದ ಉಷಾ ಅಯ್ಯರ್ ಹೇಳಿದ್ದಾರೆ.
ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಹಬ್ಬಗಳನ್ನು ಆಚರಿಸಬಹುದು ಎಂಬ ಸಂದೇಶವನ್ನು ರವಾನಿಸಲು ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ರಾಖಿಗಳನ್ನು ತಯಾರಿಸುತ್ತಿರುವುದು ಇದೇ ಮೊದಲು ಎಂದು ಅವರು ತಿಳಿಸಿದ್ದಾರೆ.
Advertisement