ಬೆಂಗಳೂರು: ಯುವತಿ ಮೇಲೆ ಮತ್ತೊಂದು ಅಚ್ಯಾಚಾರ ಪ್ರಕರಣ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ರೇಪ್ ಮಾಡಿ ಕೊಲೆ ಮಾಡಿರುವ ಘಟನೆ ಇನ್ನೂ ಸುದ್ದಿಯಲ್ಲಿರುವಾಗಲೇ ಸ್ವಾತಂತ್ರ್ಯ ದಿನಾಚರಣೆ ಕಳೆದು ಎರಡೇ ದಿನದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ತಲೆತಗ್ಗಿಸುವ ಕೃತ್ಯ ನಡೆದಿದೆ.
ನಿನ್ನೆ ಶನಿವಾರ ರಾತ್ರಿ ಈ ಹೀನ ಕೃತ್ಯ ನಡೆದಿದ್ದು, ಪಬ್ ನಲ್ಲಿ ಪಾರ್ಟಿ ಮುಗಿಸಿ ತೆರಳುತ್ತಿದ್ದ ವೇಳೆ ಯುವತಿ ಮೇಲೆ ರೇಪ್ ಆಗಿದೆ ಎಂದು ಹೇಳಲಾಗುತ್ತಿದೆ. ಹೆಚ್ ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಆಗಿದ್ದೇನು?: ಕಳೆದ ಮಧ್ಯರಾತ್ರಿ ಬೆಂಗಳೂರಿನ ಕೋರಮಂಗಲದ ಪಬ್‌ನಿಂದ ಪಾನಮತ್ತರಾಗಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಓಡಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ವಾಹನ ಅಪಘಾತವಾಗಿದ್ದು ಯುವತಿ ವಾಹನ ಬಿಟ್ಟು ಮತ್ತೊಬ್ಬನ ಬೈಕ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಆತ ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ.
ಯುವತಿಯನ್ನು ಹೆಚ್‌ಎಸ್‌ಆರ್ ಲೇಔಟ್‌ಗೆ ನಿರ್ಜನ ಪ್ರದೇಶದ ಗೋದಾಮುವೊಂದಕ್ಕೆ ಕರೆದುಕೊಂಡು ಹೋಗಿ ರೇಪ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಯುವತಿಯನ್ನು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಿಟ್ಟು ಹೋಗಿದ್ದಾನೆ. ಯುವತಿ ತನ್ನ ಸ್ನೇಹಿತೆಗೆ ಕರೆ ಮಾಡಿದ್ದಾಳೆ. ಆಕೆ ಬಂದು ಯುವತಿಯನ್ನು ಕರೆದುಕೊಂಡು ಹೋಗಿ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಸದ್ಯ ಯುವತಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯುವತಿಯ ವೈದ್ಯಕೀಯ ಪರೀಕ್ಷೆ: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್, ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿರುವುದು ನಿಜ. ಸಂತ್ರಸ್ತ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ, ಅತ್ಯಾಚಾರವಾಗಿದೆಯೇ ಎಂದು ವೈದ್ಯಕೀಯ ಪರೀಕ್ಷೆಯಿಂದ ದೃಢಪಡಲಿದೆ ಎಂದರು.
ಈ ರೀತಿಯ ಪ್ರಕರಣದಲ್ಲಿ ಕಾನೂನು ಪ್ರಕಾರ ಏನಿದೆಯೋ ಅದರಂತೆ ಪೊಲೀಸರು ಮಾಡುತ್ತಿದ್ದಾರೆ. ಮೆಡಿಕಲ್ ಟೆಸ್ಟ್ ಎಲ್ಲ ನಡೆಯುತ್ತಿದೆ ಎಂದರು.
Advertisement