
ಬೆಂಗಳೂರು: ಹೆದ್ದಾರಿಗಳಲ್ಲಿ ಸೀಟ್ ಬೆಲ್ಟ್ ಧರಿಸದೆ ನಿಯಮ ಉಲ್ಲಂಘಿಸುವವರ ಮೇಲೆ ಎಐ ಕ್ಯಾಮೆರಾಗಳು ಹದ್ದಿನ ಕಣ್ಣಿಟ್ಟಿದ್ದು, ನಿಯಮ ಉಲ್ಲಂಘಿಸುವವರಿಗೆ ದಂಡದ ಪ್ರಯೋಗ ಮಾಡಲಾಗುತ್ತಿದೆ. ಆದರೆ, ಈ ಕ್ಯಾಮೆರಾಗಳು ಡಾರ್ಕ್ ಶರ್ಟ್ ಮೇಲಿನ ಸೀಟ್ ಬೆಲ್ಟ್ ಗುರ್ತಿಸುವಲ್ಲಿ ವಿಫಲವಾಗುತ್ತಿದ್ದು, ಇದರಿಂದ ನಿಯಮ ಪಾಲಿಸಿದ್ದರೂ ಸವಾರರು ದಂಡ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ನಿಯಮ ಉಲ್ಲಂಘನೆ ಮಾಡುವವರಿಗೆ ಸಂಚಾರ ವಿಭಾಗದ ಹೊಸ ಕೃತಕ ಬುದ್ಧಿಮತ್ತೆ ವ್ಯವಸ್ಥೆಯಿಂದ ಚಲನ್‌ಗಳನ್ನು ನೀಡಲಾಗುತ್ತಿದೆ. ಈ ತಂತ್ರಜ್ಞಾನದ ಸಹಾಯದಿಂದ ಸುರಕ್ಷತಾ ನಿಯಮಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಆದರೆ, ಎಐ ಕ್ಯಾಮೆರಾಗಳಲ್ಲಿವ ಕೆಲವು ನ್ಯೂನತೆಗಳು ಸವಾರರಿಗೆ ತಲೆನೋವಾಗಿ ಪರಿಣಮಿಸಿದೆ. siliconcity.bengaluru ಎಂಬ ಹೆಸರಿನ ಫೇಸ್‌ಬುಕ್ ಪ್ರೊಫೈಲ್ ನ ವ್ಯಕ್ತಿಯೊಬ್ಬರು ಎಐ ಕ್ಯಾಮೆರಾದ ವಿಫಲತೆ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಬೆಂಗಳೂರು ಟ್ರಾಫಿಕ್ ಎಐ ಕ್ಯಾಮೆರಾಗಳು ಸೀಟ್ ಬೆಲ್ಟ್ ಧರಿಸಿದ್ದರೂ ದಂಡವನ್ನು ವಿಧಿಸುತ್ತಿದೆ. ಸೀಟ್ ಬೆಲ್ಟ್, ಶರ್ಟ್ ಹಾಗೂ ಕೋಟ್ ಒಂದೇ ರೀತಿಯ ಬಣ್ಣದ್ದಾಗಿದ್ದರೆ ಅದರಿಂದ ಸೀಟ್ ಬೆಲ್ಟ್ ಧರಿಸಿಲ್ಲ ಎಂದೇ ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಸವಾರ ಪೃಥ್ವಿ ಚಂದ್ರಶೇಖರ್ ಎಂಬುವವರು ಮಾತನಾಡಿ, ಮೈಸೂರಿನಲ್ಲಿ ಕಾರು ಚಾಲನೆ ಮಾಡುವವರು ತಮ್ಮ ತಮ್ಮ ಚಲನ್ ಗಳನ್ನು ಪರಿಶೀಲಿಸಬೇಕು. ಈ ಪೋಸ್ಟ್ ನೋಡಿದ ಬಳಿಕ ನಾನೂ ಕೂಡ ನನ್ನ ಚಲನ್ ಪರಿಶೀಲನೆ ನಡೆಸಿದೆ. ಇದು ಸಾಕಷ್ಟು ಆಶ್ಚರ್ಯ ತರಿಸಿತು. ITMS ಉದಯ ರವಿ ರಸ್ತೆಯಲ್ಲಿ ಸೀಟ್‌ಬೆಲ್ಟ್ ಧರಿಸದಿರುವುದಕ್ಕೆ ನನಗೆ ದಂಡ ವಿಧಿಸಲಾಗಿದೆ. ಆದರೆ, ನಾನು ಸೀಟ್ ಬೆಲ್ಟ್ ಧರಿಸಿದೆ ಎಂದೂ ಕಾರನ್ನು ಚಾಲನೆ ಮಾಡುವುದೇ ಇಲ್ಲ. ಸೀಟ್ ಬೆಲ್ಟ್ ಧರಿಸದೆ ಕಾರನ್ನು ಚಾಲನೆ ಮಾಡುವುದಕ್ಕೂ ಆಗುವುದಿಲ್ಲ. ಹೀಗಾಗಿ ಪ್ರತೀಯೊಬ್ಬರೂ ಕೂಡ ತಮ್ಮ ಚಲನ್ ಗಳನ್ನು ಪರಿಶೀಲಿರುವಂತೆ ಮನವಿ ಮಾಡಿಕೊಳ್ಳುತ್ತೇನೆ ಹಾಗೂ ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆಂದು ತಿಳಿಸಿದ್ದಾರೆ.
ಈ ನಡುವೆ ಮೈಸೂಲು ಪೊಲೀಸ್ ಆಯುಕ್ತ ಸೀಮಾ ಲಾಡ್ಕರ್ ಅವರು, ಎಐ ಕ್ಯಾಮೆರಾಗಳ ನ್ಯೂನತೆಗಳನ್ನು ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಮುಖ್ಯಸ್ಥರಾಗಿರುವ ಎಡಿಜಿಪಿ ಅಲೋಕ್ ಕುಮಾರ್ ಅವರ ಗಮನಕ್ಕೂ ತರಲಾಗಿದೆ. ತಂತ್ರಜ್ಞಾನವನ್ನು ಉತ್ತಮಗೊಳಿಸಲು ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಹೆಚ್ಚುವರಿ ಟ್ರಾಫಿಕ್ ಕಮಿಷನರ್ ಎನ್ ಅನುಚೇತ್ ಅವರು ಮಾತನಾಡಿ, ಐಎ ಕ್ಯಾಮೆರಾ ಸೆರೆ ಹಿಡಿದು ರವಾನಿಸಿದ ಪ್ರತಿಯೊಂದು ಉಲ್ಲಂಘನೆಯ ಚಿತ್ರವನ್ನು ಮೇಲ್ವಿಚಾರಣೆ ನಡೆಸಿ, ಉಲ್ಲಂಘನೆಗಳು ನಿಜವಾಗಿದ್ದರೆ ಮಾತ್ರ ಚಲನ್ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಚಲನ್‌ಗಳು ತಪ್ಪಾಗಿವೆ ಎಂದು ಭಾವಿಸುವ ಚಾಲಕರು ಅವುಗಳನ್ನು ರದ್ದುಗೊಳಿಸಲು automationpubbcp@ksp.gov.in ಅಥವಾ bangaloretrafficpolice@gmail.com ಗೆ ಮೇಲ್ ಮಾಡಬಹುದು ಅಥವಾ ಬಿಟಿಪಿ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್, ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗೆ ಭೇಟಿ ನೀಡಬಹುದು ಅಥವಾ ಕೆಎಸ್‌ಪಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಮಾಹಿತಿ ನೀಡಬಹುದು ಎಂದು ಹೇಳಿದ್ದಾರೆ.
Advertisement