ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ಹಾಸ್ಟೆಲ್‌ಗಳಲ್ಲಿ ಪ್ರವೇಶ ಮಿತಿಗಿಂತ ಅಧಿಕ ಪಟ್ಟು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿರುವುದಕ್ಕೆ ಹೈಕೋರ್ಟ್ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದ್ದು, ಪರಿಹಾರ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ವಿಚಾರಣೆ ವೇಳೆ ಸರ್ಕಾರಿ ಪರ ವಕೀಲರು. ರಾಜ್ಯದ ಎಸ್‌ಟಿ/ಎಸ್‌ಸಿ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಮಿತಿ ಹಾಗೂ ಸದ್ಯ ಇರುವ ಸಂಖ್ಯೆ, ವಾರ್ಡ್‌ನ ಹುದ್ದೆಗಳ ಮಾಹಿತಿ ಹೊಂದಿದ ಕಂದಾಯ ವಿಭಾಗವಾರು ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಮೆಟ್ರಿಕ್‌ಪೂರ್ವ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶ ಮಿತಿ 50 ಇದ್ದು, ಅಲ್ಲಿ 150 ವಿದ್ಯಾರ್ಥಿಗಳು ಇದ್ದಾರೆ. ಕೊಪ್ಪಳದ ಹಾಸ್ಟೆಲ್‌ನಲ್ಲಿ 75 ಪ್ರವೇಶ ಮಿತಿ ಇದ್ದರೆ, 214 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯದ ಬಹುತೇಕ ವಿದ್ಯಾರ್ಥಿ ನಿಲಯಗಳ ಸ್ಥಿತಿ ಇದೇ ಆಗಿದೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳನ್ನು ಈ ರೀತಿಯಾಗಿ ನಡೆಸಿಕೊಳ್ಳಲಾಗುತ್ತಿರುವ ಬಗ್ಗೆ ಸರ್ಕಾರ ತಕ್ಷಣ ಗಮನ ಹರಿಸಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ. ಅಲ್ಲದೆ, 1890 ಹಿರಿಯ ವಾರ್ಡನ್ ಹುದ್ದೆಗಳಲ್ಲಿ 1342 ಭರ್ತಿ ಆಗಿದ್ದು, 548 ಹುದ್ದೆಗಳು ಖಾಲಿ ಇವೆ. 518 ಕಿರಿಯ ವಾರ್ಡನ್ ಹುದ್ದೆಗಳ ಪೈಕಿ 465 ಭರ್ತಿ ಆಗಿದ್ದು, 53 ಹುದ್ದೆಗಳು ಖಾಲಿ ಇವೆ. ಈ ನಿಟ್ಟಿಯಲ್ಲಿಯೂ ಸರ್ಕಾರ ಗಮನಹರಿಸಬೇಕಿದೆ ಎಂದು ನ್ಯಾಯಪೀಠ ಹೇಳಿತು.
ಹಾಸ್ಟೆಲ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿರುವುದರಿಂದ ಎಸ್‌ಟಿ/ಎಸ್‌ಸಿ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಘನತೆ-ಗೌರವದಿಂದ ಇರುವುದಕ್ಕೆ ಸರ್ಕಾರದ ಬಳಿ ಇರುವ ಪರಿಹಾರ ಕ್ರಮವೇನು, ಖಾಲಿ ಹುದ್ದೆಗಳ ಭರ್ತಿಗೆ ಯಾವ ಕ್ರಮ ಕೈಗೊಳ್ಳಲಾಗುವುದು ಎಂಬ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.
Advertisement