ಬೆಂಗಳೂರು: ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿ ಬಿದ್ದು, ಚಾಲಕ ಸೇರಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಸದಾಶಿವನಗರ ಪೊಲೀಸ್ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಗಾಯಾಳು ಜೀವ ಎಂ ಅವರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟೋ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ, ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಆಟೋ ಜೊತೆಗೆ ಮತ್ತೊಂದು ವಾಹನಕ್ಕೂ ಹಾನಿಯಾಗಿದ್ದು, ಚಾಲಕನ ಕೈ ಮೂಳೆ ಮುರಿತಗೊಂಡಿದೆ ಎಂದು ತಿಳಿದುಬಂದಿದೆ. ಆಗಸ್ಟ್ 12 ರಿಂದ ಈ ವರೆಗೂ ಒಟ್ಟು 3 ಘಟನೆಗಳು ವರದಿಯಾಗಿವೆ.
ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ ಮಾತನಾಡಿ, ಅರಣ್ಯಾಧಿಕಾರಿ ಹಾಗೂ ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮರ ಬಿದ್ದ ಪರಿಣಾಮ ಜೀವ ಅವರ ತಲೆಗೆ ಗಂಭೀರವಾದ ಗಾಯವಾಗಿದೆ. ವೈದ್ಯರು 24 ಗಂಟೆಗಳ ಕಾಲ ನಿಗಾದಲ್ಲಿರಿಸಿದ್ದಾರೆ. ಬೆನ್ನುಹಿರಿ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಆತನ ಮನೆಯವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರೂ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.
ಮತ್ತೊಬ್ಬ ವಾಹನದ ಚಾಲಕನ ಕೈ ಮೂಳೆ ಮುರಿತಗೊಂಡಿದ್ದು, ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪಾಲಿಕೆ ಚಿಕಿತ್ಸೆಯ ವೆಚ್ಚವನ್ನು ಭರಿಸಲಿದೆ ಎಂದು ತಿಳಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಬಿಬಿಎಂಪಿಗೆ ನೂರಾರು ದೂರವಾಣಿ ಕರೆಗಳು ಬಂದಿದ್ದವು. ಆದರೆ, ಯಾವುದೇ ಸಾವು-ನೋವುಗಳು ವರದಿಯಾಗಿರಲಿಲ್ಲ. ಕಳೆದ 10 ದಿನಗಳಿಂದ ಮರ ಬಿದ್ದು ಹಲವರು ಗಾಯಗೊಳ್ಳುತ್ತಿರುವುದು, ಸಾವುಗಳು ವರದಿಯಾಗುತ್ತಿವೆ ಎಂದು ಹೇಳಿದ್ದಾರೆ.
Advertisement