ವೈದ್ಯರ ಬೇಡಿಕೆಗಳ ಅಧ್ಯಯನಕ್ಕೆ ಸಮಿತಿ ರಚನೆ!

ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಸಂಘಟನೆಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಚಿವರು ಮಂಗಳವಾರ ಸಭೆ ನಡೆಸಿದರು.
ಸಚಿವ ದಿನೇಶ್‌ ಗುಂಡೂರಾವ್‌
ಸಚಿವ ದಿನೇಶ್‌ ಗುಂಡೂರಾವ್‌
Updated on

ಬೆಂಗಳೂರು: ರಾಜ್ಯದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ರಕ್ಷಣೆ ಹಾಗೂ ಅವರ ಬೇಡಿಕೆಗಳ ಅಧ್ಯಯನ ನಡೆಸಲು ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಗಳ ಸಚಿವ ದಿನೇಶ್‌ ಗುಂಡೂರಾವ್‌ ಅವರು ಮಂಗಳವಾರ ಹೇಳಿದರು.

ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ವೈದ್ಯಕೀಯ ಸಂಘಟನೆಗಳ ಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಚಿವರು ಮಂಗಳವಾರ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸಚಿವರು, ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಅವರ ಸುರಕ್ಷೆಗೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ, ವೈದ್ಯರು, ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ ಹಿಂಸಾಚಾರ ತಡೆಯುವ ಉದ್ದೇಶದಿಂದ ಹೊಸ ಕಾಯ್ದೆ ಜಾರಿ ಮಾಡಲಾಗುವುದು. ಇದಕ್ಕಾಗಿ ಈಗಾಗಲೇ ಕರ್ನಾಟಕ ವೈದ್ಯಕೀಯ ನೋಂದಣಿ ಮತ್ತು ಇತರ ಕಾನೂನು (ತಿದ್ದುಪಡಿ) ಮಸೂದೆಗೆ ರಾಜ್ಯಪಾಲರು ಸೋಮವಾರ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಹೊಸ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ವಿರುದ್ಧ ಅಗೌರವ ತೋರಿದರೆ, ಕೆಟ್ಟದಾಗಿ ಮಾತನಾಡಿದರೆ ಮತ್ತು ಹಿಂಸಾಚಾರ ನಡೆಸಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು. ಇದು ಜಾಮೀನುರಹಿತ ಅಪರಾಧ. 3 ರಿಂದ 7 ವರ್ಷದವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು. ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡರೂ ಜಾಮೀನುರಹಿತ ಅಪರಾಧವಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಬೇಗನೆ ಇತ್ಯರ್ಥಗೊಳಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸಬೇಕು ಎಂಬ ಸಲಹೆಯೂ ಇದೆ.

ಸಚಿವ ದಿನೇಶ್‌ ಗುಂಡೂರಾವ್‌
ವೈದ್ಯರು, ವೈದ್ಯಕೀಯ ಸಿಬ್ಬಂದಿ‌ಗಳ ಸುರಕ್ಷತೆಗಾಗಿ ಆ.20ರಂದು ಸಭೆ: ಸಚಿವ ದಿನೇಶ್ ಗುಂಡೂರಾವ್

ಕೊಲ್ಕತ್ತಾದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ವೈದ್ಯ ಸಮೂಹ ಮಾತ್ರವಲ್ಲ, ಎಲ್ಲರಲ್ಲೂ ಅಭದ್ರತೆ ಮತ್ತು ಭಯದ ವಾತಾವರಣ ಮೂಡಿಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಶೇ 50ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ಇವರು ಅಸುರಕ್ಷಿತ ಮತ್ತು ಭಯದ ವಾತಾವರಣದಲ್ಲಿ ಮಾಡಬೇಕಾಗಿದೆ. ರಾಜ್ಯದಲ್ಲಿ ಹೊಸ ಕಾಯ್ದೆಯಿಂದ ವೈದ್ಯಕೀಯ ಸಮುದಾಯಕ್ಕೆ ಹೆಚ್ಚಿನ ಸುರಕ್ಷತೆ ಸಿಗಲಿದೆ. ವೈದ್ಯರು ಮತ್ತು ವೈದ್ಯಕೀಯ ಸಮುದಾಯವನ್ನು ಗೌರವ ದಿಂದ ಕಾಣುವ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಗಳ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಭದ್ರತೆಯನ್ನು ಸುಧಾರಿಸಲು ಮೊಬೈಲ್ ಅಪ್ಲಿಕೇಶನ್ ಆಧಾರಿತ ತಂತ್ರಜ್ಞಾನದ ಬಳಕೆ, ಎಮರ್ಜೆನ್ಸಿ ಅಲರ್ಟ್ಸ್, ತುರ್ತು ಪ್ಯಾನಿಕ್ ಬಟನ್‌ಗಳನ್ನು ಅಳವಡಿಕೆ, ರಾತ್ರಿ ವೇಳೆ ಆಸ್ಪತ್ರೆಗಳಲ್ಲಿ ಪೊಲೀಸ ಭದ್ರತೆ ಇರಬೇಕು. ಇದರಿಂದ ವೈದ್ಯಕೀಯ ವೃತ್ತಿಪರರ ಮೇಲಿನ ದಾಳಿ ಪ್ರಕರಣಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಾಯವಾಗುತ್ತದೆ ಎಂಬ ಕೆಲವು ಪ್ರಮುಖ ಸಲಹೆಗಳು ಸಭೆಯಲ್ಲಿ ಬಂದಿವೆ.

ಈ ಸಲಹೆಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದ್ದು, ಸಮಿತಿಯು ಸಲಹೆಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಲಿವೆ. ವರದಿಯಲ್ಲಿ ಮಾಡಿರುವ ಶಿಫಾರಸುಗಳ ಅನುಷ್ಠಾನಕ್ಕೆ ಕಾರ್ಯಪಡೆ ರಚಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com