
ಬೆಂಗಳೂರು: ಕಾರಿಗೆ ಬೈಕ್ ಟಚ್ ಆಗಿದ್ದಕ್ಕೇ ಬೈಕ್ ನಲ್ಲಿದ್ದ ಯುವಕನನ್ನು ಕಾರಿನಲ್ಲಿ ಅಟ್ಟಾಡಿಸಿ ಗುದ್ದಿ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ದಿನೇದಿನೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದಲ್ಲಾ ಒಂದು ವಿಚಾರಕ್ಕೆ ವಾಹನ ಸವಾರರು ಜಗಳ ಮಾಡಿಕೊಳ್ಳುತ್ತಿರುವ ವರದಿಗಳು ಆಗಾಗ್ಗೆ ಕೇಳಿಬರುತ್ತಿವೆ. ಇದೀಗ ಇಲ್ಲೊಂದು ಪ್ರಕರಣದಲ್ಲಿ ಕಾರಿಗೆ ಬೈಕ್ ಟಚ್ ಆಗಿದ್ದಕ್ಕೇ ಆಕ್ರೋಶಗೊಂಡ ಗುಂಪೊಂದು ಬೈಕ್ ಸವಾರನನ್ನು ಹಿಮ್ಮೆಟ್ಟಿ ಕಾರಿನಲ್ಲಿ ಗುದ್ದಿ ಕೊಲೆ ಮಾಡಿದೆ.
ಬೆಂಗಳೂರಿನ ವಿದ್ಯಾರಣ್ಯಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕನನ್ನು ಡೆಲಿವರಿ ಬಾಯ್ ಮಹೇಶ್ ಎಂದು ಗುರುತಿಸಲಾಗಿದೆ.
ಸಂತ್ರಸ್ಥ ಮಹೇಶ್ ಬುಧವಾರ ಸಂಜೆ ಗೆಳೆಯರಾದ ಬಾಲಾಜಿ ಮತ್ತು ನಿಖಿಲ್ ಜೊತೆ ಟೀ ಕುಡಿಯಲು ಹೋಗಿದ್ದ. ಟೀ ಕುಡಿದು ಬೈಕ್‌ನಲ್ಲಿ ಬರುವಾಗ ಸ್ಪೀಡಾಗಿ ಬಂದ ಕಾರು ಹಾರ್ನ್ ಮಾಡಿದರೂ ಇವರು ಸೈಡ್ ಕೊಟ್ಟಿಲ್ಲ. ಈ ವೇಳೆ ಕಾರಿಗೆ ಬೈಕ್ ಸ್ವಲ್ಪ ಟಚ್ ಆಗಿತ್ತಂತೆ. ಇದೇ ಸಿಟ್ಟಲ್ಲಿ ಕಾರು ಚಾಲಕ ಅರವಿಂದ್, ಬೈಕ್ ಚಾಲಕನನ್ನ ಚೇಸ್ ಮಾಡಿಕೊಂಡು ಹೋಗಿದ್ದಾನೆ. ಮುಖ್ಯ ರಸ್ತೆಯಿಂದ ತಿರುಗಿಸುವಾಗ ಬೈಕ್‌ನಲ್ಲಿ ಹಿಂಬದಿ ಕೂತಿದ್ದ ಇಬ್ಬರು ಕೆಳಗೆ ಬಿದ್ದಿದ್ದಾರೆ. ಆದರೆ, ಜಿಕೆವಿಕೆ ಲೇಔಟ್‌ಗೆ ನುಗ್ಗಿದ ಮಹೇಶ್ ಬೈಕ್‌ಗೆ ಕಾರು ಚಾಲಕ ವೇಗವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ತಿರುವಿನಲ್ಲಿದ್ದ ಮನೆಯ ಕಾಂಪೌಂಡ್‌ಗೆ ಮಹೇಶ್ ತಲೆ ಬಡಿದಿದೆ.
ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರ ಪೆಟ್ಟಾಗಿದ್ದು, ಆತ ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಅಪಘಾತದ ನಂತರ ಗಾಯಗೊಂಡಿದ್ದ ಮಹೇಶ್‌ನನ್ನ ಹೊತ್ತೊಯ್ಯಲು ಕಾರು ಚಾಲಕ ಮುಂದಾಗಿದ್ದಾನೆ. ಅಷ್ಟು ಹೊತ್ತಿಗೆ ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವ ತಕ್ಷಣ ಮಹೇಶ್ ನನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ.
ಇಬ್ಬರು ವಶಕ್ಕೆ
ಸುದ್ದಿ ತಿಳಿದು ವಿದ್ಯಾರಣ್ಯಪುರ ಠಾಣೆ ಪೊಲೀಸರು ಸ್ಥಳಕ್ಕೆ ಹೋದಾಗ ಮೊದಲು ಅಪಘಾತವೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ನಂತರ ಪರಿಶೀಲಿಸಿ ವಿಚಾರಣೆ ನಡೆಸಿದಾಗ ಕಾರು ಡಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಿರುವುದು ತಿಳಿದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾರು ಡಿಕ್ಕಿ ಹೊಡೆಸಿ ಬೈಕ್ ಸವಾರನ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಹಾಗೂ ಆತನ ಸ್ನೇಹಿತ ಚೆನ್ನಕೇಶವನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಅಪಘಾತದಲ್ಲಿ ತಪ್ಪಿಸಿಕೊಂಡಿದ್ದ ಮಹೇಶ್ ಸ್ನೇಹಿತ ಬಾಲಾಜಿ ಎಂಬ ಯುವಕ ನೀಡಿದ ದೂರಿನ ಅನ್ವಯ ವಿದ್ಯಾರಾಣ್ಯಪುರ ಪೊಲೀಸರು ಕೊಲೆ ಕೇಸ್ ದಾಖಲಿಸಿದ್ದಾರೆ.
Advertisement