
ಬೆಂಗಳೂರು: ತನ್ನ ತಾಯಿ ನೀಡಿದ ದೂರು ಸ್ವೀಕರಿಸಲು ಉಡಾಫೆ ವರ್ತನೆ ತೋರಿದ ಪೊಲೀಸರ ಮೇಲೆ ಸಿಟ್ಟಿಗೆದ್ದ ಯುವಕನೊಬ್ಬ ವಿಧಾನಸೌಧದ ಮುಂದೆಯೇ ಬೈಕ್'ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬುಧವಾರ ನಡೆದಿದೆ.
ಚಿತ್ರದುರ್ಗದ ಚಳ್ಳಕೆರೆ ಮೂಲದ ಯಶವಂತಪುರ ನಿವಾಸಿ ಪೃಥ್ವಿರಾಜ್ (27) ಎಂಬ ಯುವಕ ಬುಧವಾರ ಮಧ್ಯಾಹ್ನ ವಿಧಾನಸೌಧದ ಮುಂಭಾಗದಲ್ಲಿ ಎಲೆಕ್ಟ್ರಿಕ್ ಬೈಕ್ ನಿಲ್ಲಿಸಿ ಬೆಂಕಿ ಹಚ್ಚಿದ್ದು, ಬೈಕ್ ಸಂಪೂರ್ಣ ಹೊತ್ತಿ ಉರಿದಿದೆ. ಘಟನೆ ವೇಳೆ ಸುತ್ತಮುತ್ತಲಿನ ರಸ್ತೆಯಲ್ಲಿ ದಟ್ಟ ಹೊಗೆ ಆವರಿಸಿದ್ದು, ಇದು ಸ್ಥಳದಲ್ಲಿದ್ದ ಜನರು ಆತಂಕಕ್ಕೊಳಗಾಗುವಂತೆ ಮಾಡಿತ್ತು.
ಬಳಿಕ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆದು, ಬೆಂಕಿ ನಂದಿಸುವಂತೆ ಮಾಡಿದರು. ನಂತರ ಯುವಕನನ್ನು ವಿಧಾನಸೌಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬಂಧನಕ್ಕೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಪೃಥ್ವಿರಾಜ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸ್ನೇಹಿತರೊಂದಿಗೆ ಟ್ರೆಕ್ಕಿಂಗ್‌ಗೆ ತೆರಳಿದ್ದರು. ಆದರೆ, ಆತನ ತಾಯಿಗೆ ಮಗನನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗಿಲ್ಲ. ಇದರಿಂದ ಆತಂಕಕ್ಕೊಳಗಾದ ಅವರು, ಚಳ್ಳಕೆರೆ ಪೊಲೀಸ್ ಠಾಣೆಗೆ ತೆರಳಿ ನಾಪತ್ತೆ ದೂರು ದಾಖಲಿಸಲು ಮುಂದಾಗಿದ್ದಾರೆ. ಆದರೆ, ಪೊಲೀಸರು ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದು, ಶೀಘ್ರದಲ್ಲೇ ವಾಪಸ್ಸಾಗುತ್ತಾನೆಂದು ಹೇಳಿದ್ದಾರೆ.
ಬಳಿಕ ಮನೆಗೆ ಮರಳಿದ ಮಹಿಳೆ ಪೃಥ್ವಿರಾಜ್ ಮನೆಗೆ ಹಿಂತಿರುಗಿದ ವೇಳೆ ಪೊಲೀಸರ ವರ್ತನೆ ಬಗ್ಗೆ ತಿಳಿಸಿ್ದಾರೆ. ಇದನ್ನು ವಿಚಾರಿಸಲು ಇಬ್ಬರೂ ಮತ್ತೆ ಠಾಣೆಗೆ ಬಂದಿದ್ದು, ಈ ವೇಳೆಯೂ ಪೊಲೀಸರು ನಿಂದಿಸಿದ್ದರು ಎನ್ನಲಾಗಿದೆ.
ತಾಯಿ ಮುಂದೆ ತನ್ನನ್ನ ನಿಂದಿಸಿದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಪೃಥ್ವಿರಾಜ್ ಪೊಲೀಸರ ಮೇಲಿದ್ದ ಸಿಟ್ಟಿಗೆ ವಿಧಾನಸೌಧದ ಮುಂದೆ ತನ್ನ ಬೈಕ್ ನಿಲ್ಲಿಸಿ, ತನಗೆ ನ್ಯಾಯ ಸಿಕ್ಕಿಲ್ಲ ಎಂದು ಬೆಂಕಿ ಹಚ್ಚಿಸಿದ್ದಾರೆ. ಇದೀಗ ಪೃಥ್ವಿರಾಜ್ ವಿರುದ್ಧ ಬಿಎನ್‌ಎಸ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement