ಬೆಂಗಳೂರು: ಕೆಪಿಎಸ್‌ಸಿ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆ ಮುಂದೂಡಬೇಕೆಂಬ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದು, ಮಂಗಳವಾರವೇ ಪರೀಕ್ಷೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಸುದೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು, ಕೆಪಿಎಸ್'ಸಿ ಮೂಲಕ ಆಗಸ್ಟ್ 27ರಂದು ನಿಗದಿಪಡಿಸಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಘ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಿದ್ದು, ನಿಗದಿತ ದಿನದಂದೇ ಪರೀಕ್ಷೆ ನಡೆಸಲು ಆಯೋಗ ನಿರ್ಧಾರ ತೆಗೆದುಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಕೆಪಿಎಸ್‌ಸಿ, ಡಿಪಿಎಆರ್ ಮತ್ತು ಸಿಎಂಒನ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ. ವಾಟ್ಸಾಪ್ ಸಂದೇಶಗಳ ಸುರಿಮಳೆ ಸುರಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಅನ್ನು ನಾನು ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕೆಪಿಎಸ್‌ಸಿ ಸುತ್ತ ಅನುಮಾನಗಳ ಹುತ್ತ ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆಯ
ಕೆಪಿಎಸ್‌ಸಿ ಅಥವಾ ಸರ್ಕಾರವು ನೀಡಿರುವ ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಯನ್ನು ಪಡೆದ ಸುಮಾರು ಈ 1500 ವಿದ್ಯಾರ್ಥಿಗಳ (ವಯೋಮಿತಿ ಸಡಿಲಿಕೆ ನೀಡಿದ ನಂತರ ತಡವಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ) ಈ ಲಾಬಿಗೆ ಮಣಿದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆಯ ಅವರು ಅನ್ಯಾಯವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ, ಈ 2.5 ಲಕ್ಷ ಅಭ್ಯರ್ಥಿಗಳು ಪೂರ್ಣ ಸಿದ್ಧತೆ ನಡೆಸಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ಬರಲು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ವಯೋಮಿತಿ ಸಡಿಲಿಕೆಯಿಂದಾಗಿ ಹೆಚ್ಚುವರಿ ಅವಕಾಶ ಪಡೆದಿರುವವರು ಪರೀಕ್ಷೆ ಮುಂದೂಡಿಕೆಯಾದರೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆಂದು ತಿಳಿಸಿದ್ದಾರೆ.
ಜೊತೆಯಲ್ಲಿ ಪರೀಕ್ಷೆಗಳು ಪದೇ ಪದೇ ಮುಂದೂಡಿಕೆ ಆಗುತ್ತಿರುವುದರ ವಾಸ್ತಾಂಶಗಳನ್ನೂ ಅತೀಕ್ ಅವಕು ವಿವರಿಸಿದ್ದಾರೆ.
ಈ ಮೊದಲು ಫೆ.26ರಂದು ಪೂರ್ವಭಾವಿ ಪರೀಕ್ಷೆಯನ್ನು ಮೇ 5ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಬಳಿಕ ಲೋಕಸಭೆ ಚುನಾವಣೆ ಘೋಷಣೆಯಾಗಿದ್ದರಿಂದ 2ನೇ ಬಾರಿಗೆ ಜು.7ಕ್ಕೆ ನಿಗದಿಯಾಯಿತು. ಆ ವೇಳೆಗೆ ಯುಪಿಎಸ್‌ಸಿ ಪರೀಕ್ಷೆ ಎದುರಾಗಿದ್ದರಿಂದ ಜು.21ಕ್ಕೆ ದಿನಾಂಕವನ್ನು ಮರುಪರಿಷ್ಕರಿಸಲಾಯಿತು. ಈ ಕುರಿತು ಜೂ.21ಕ್ಕೆ ದಿನಾಂಕ ಘೋಷಿಸಿದಾಗ 2017-18ರ ಸಾಲಿನ ಅಭ್ಯರ್ಥಿಗಳು ಹೆಚ್ಚುವರಿ ಅವಕಾಶ ಪಡೆಯಲು ವಯೋಮಿತಿಯ ಗರಿಷ್ಠ ಸಡಿಲಿಕೆಯನ್ನು ಕಳೆದುಕೊಂಡಿದ್ದರು.
ಅವರಿಗೆ ಅನುಕೂಲ ಮಾಡಿಕೊಡಲು ಸಾಫ್ಟ್ ವೇರ್‌ನಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾಡಬೇಕಾಯಿತು. ಜುಲೈ 6ಕ್ಕೆ ಇದು ಪೂರ್ಣಗೊಂಡಿದ್ದು, ಜು.21ಕ್ಕೆ 1560 ಅರ್ಜಿಗಳು ಸ್ವೀಕರಿಸಲ್ಪಟ್ಟಿದ್ದವು. ಇದರಿಂದಾಗಿ ಆ.25ಕ್ಕೆ ಮೂರನೇ ಬಾರಿಗೆ ದಿನಾಂಕ ನಿಗದಿಪಡಿಸಲಾಗಿತ್ತು. ಈ ನಡುವೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಐಬಿಪಿಎಸ್ ಪರೀಕ್ಷೆಗಳಿಗೆ ಜು.1ರಂದು ದಿನಾಂಕ ಘೋಷಣೆಯಾಗಿತ್ತು. ಆದರೆ ಅದರ ಬಗ್ಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಆನ್‌ಲೈನ್ನಲ್ಲೂ ಲಭ್ಯವಿರಲಿಲ್ಲ, ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಚರ್ಚೆ ನಡೆಸಿ ಆ.25ರ ಬದಲಾಗಿ 27ರಂದು ಪರೀಕ್ಷೆ ನಡೆಸಲು ಆ.3ರಂದು ಹೊಸ ದಿನಾಂಕವನ್ನು ಘೋಷಿಸಲಾಯಿತು ಎಂದು ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳ ಅವಧಿಯಲ್ಲಿ ಭಾನುವಾರಗಳಂದು ಬಿಡುವಿಲ್ಲದ ಕಾರಣ ವಾರದ ಕೆಲಸದ ದಿನವೇ ಪರೀಕ್ಷೆ ನಡೆಸಲಾಗುತ್ತಿದೆ. ಎರಡೂವರೆ ಲಕ್ಷ ವಿದ್ಯಾರ್ಥಿಗಳು ಇದಕ್ಕೆ ತಯರಾಗಿದ್ದಾರೆ. ಕಾಗದಪತ್ರಗಳ ಮುದ್ರಣಕ್ಕೆ ನಾಲ್ಕರಿಂದ 5 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಸುದೀರ್ಘ ಕಾಲದವರೆಗೂ ಮುದ್ರಿತ ದಸ್ತವೇಜುಗಳನ್ನು ರಕ್ಷಿಸುವುದು ಸೂಕ್ತವಲ್ಲ. ಪ್ರಶ್ನೆಪತ್ರಿಕೆ ಬಹಿರಂಗದಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ವಾರದ ರಜಾ ದಿನವೇ ಪರೀಕ್ಷೆ ನಡೆಸುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಪ್ರತಿಭಟನೆ: ಹಲವು ವಶಕ್ಕೆ
ಈ ನಡುವೆ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಸದಸ್ಯರು ವಿಜಯನಗರ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಹಲವರನ್ನು ವಶಕ್ಕೆ ಪಡೆದರು.
ಘಟನೆ ವೇಳೆ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಬಿಜೆಪಿ ರಾಜ್ಯ ಯುವ ಅಧ್ಯಕ್ಷ ಧೀರಜ್ ಮುನಿರಾಜು ಅವರು ಆರೋಪಿಸಿದ್ದು, ಬಿಜೆಪಿ ಸದಸ್ಯರ ಬಂಧನವನ್ನು ಖಂಡಿಸಿದ್ದಾರೆ.
ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಖಂಡಿಸಿದ್ದಾರೆ. ಇದು ಅಮಾನವೀಯ. ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಹೋದ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಏತನ್ಮಧ್ಯೆ ಬಿಜೆಪಿ ರಾಷ್ಟ್ರೀಯ ಯುವ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ರಾಜ್ಯ ಬಿಜೆಪಿ ಯುವ ಅಧ್ಯಕ್ಷ ಧೀರಜ್ ಮುನಿರಾಜು ನೇತೃತ್ವದ ನಿಯೋಗ ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ.
Advertisement