ಬೆಳಗಾವಿ: ಕೌಜಲಗಿಯಲ್ಲಿ ಸಂಗೊಳ್ಳಿ ರಾಯಣ್ಣನ ಕೋಟೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಯಣ್ಣ ಮೂರ್ತಿ ಮತ್ತು ಕೋಟೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಷಡ್ಯಂತ್ರ ಮಾಡುತ್ತಲೇ ಇದ್ದಾರೆ ಎಂದರು.
ಸಂಗೊಳ್ಳಿ ರಾಯಣ್ಣನ ಕೋಟೆ
ಸಂಗೊಳ್ಳಿ ರಾಯಣ್ಣನ ಕೋಟೆ
Updated on

ಬೆಳಗಾವಿ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭವ್ಯ ಕಂಚಿನ ಮೂರ್ತಿ ಮತ್ತು ಕೋಟೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉದ್ಘಾಟಿಸಿದರು.

70 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ರಾಯಣ್ಣ ಮೂರ್ತಿ ಮತ್ತು ಕೋಟೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ರಾಣಿ ಚನ್ನಮ್ಮನ ಬಲಗೈ ಬಂಟ ರಾಯಣ್ಣ ಅತ್ಯಂತ ಪರಾಕ್ರಮಿ. ಬ್ರಿಟಿಷರು ರಾಣಿ ಚನ್ನಮ್ಮನ ಆಸ್ಥಾನದ ಮೇಲೆ ದಾಳಿ ನಡೆಸಿದಾಗ ರಾಯಣ್ಣನ ಹೋರಾಟದಿಂದ, ಶೌರ್ಯದಿಂದ ಗೆಲುವು ಸಾಧ್ಯವಾಯಿತು. ಎರಡನೇ ಯುದ್ಧದಲ್ಲಿ ಸೋಲಾದರೂ ಬ್ರಿಟಿಷರ ಕೈಗೆ ಸಿಗದೆ ತಪ್ಪಿಸಿಕೊಂಡ ರಾಯಣ್ಣ ಗೆರಿಲ್ಲಾ ಸೈನ್ಯ ಕಟ್ಟಿ, ಗೆರಿಲ್ಲಾ ಯುದ್ಧ ಮಾಡಿ ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿದರು. ಇದರಿಂದ ಬ್ರಿಟಿಷರು ನೆಮ್ಮದಿ ಕೆಡಿಸಿಕೊಂಡಿದ್ದರು. ಆದರೆ ನಮ್ಮವರೇ ರಾಯಣ್ಣನನ್ನು ಬ್ರಿಟೀಷರಿಗೆ ಹಿಡಿದುಕೊಟ್ಟರು ಎಂದರು.

ನಮ್ಮವರ ದೇಶದ್ರೋಹದಿಂದ ರಾಯಣ್ಣ ಬ್ರಿಟಿಷರ ವಶವಾದರು. ರಾಯಣ್ಣ ಈಜಾಡುವಾಗ ಅವರ ಕೈಯಲ್ಲಿ ಆಯುಧ ಇರುವುದಿಲ್ಲ. ಈ ವೇಳೆ ಅವರನ್ನು ಬಂಧಿಸುವುದು ಸುಲಭ ಎಂದು ಬ್ರಿಟಿಷರಿಗೆ ಉಪಾಯ ಕೊಟ್ಟು ಬಂಧನಕ್ಕೆ ಕಾರಣರಾದವರು ನಮ್ಮವರೇ ಎಂದರು.

ಸಂಗೊಳ್ಳಿ ರಾಯಣ್ಣನ ಕೋಟೆ
MUDA Case: 'ವೈಟ್ನರ್‌ ಹಿಂದಿರುವ ಅಕ್ಷರಗಳೇನು ಎಂಬುದನ್ನು ಸ್ಪಷ್ಟವಾಗಿ ನೋಡಿ'- ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಇಂಥಾ ದೇಶದ್ರೋಹಿಗಳು ನಮ್ಮಲ್ಲೇ ಇದ್ದಾರೆ. ಈ ಬಿಜೆಪಿಯವರು ನನ್ನನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಷಡ್ಯಂತ್ರ ಮಾಡುತ್ತಲೇ ಇದ್ದಾರೆ. ಆದರೆ ಎಲ್ಲಿಯವರೆಗೂ ನಿಮ್ಮ ಆಶೀರ್ವಾದ ನನ್ನ ಮೇಲೆ ಇರುತ್ತದೋ ಅಲ್ಲಿಯವರೆಗೂ ಈ ಸಿದ್ದರಾಮಯ್ಯನನ್ನು ಕೆಳಗಿಳಿಸಲು ಸಾಧ್ಯವಿಲ್ಲ.

ಹಿಂದುಳಿದ ಸಮುದಾಯದವರು ಸಿಎಂ ಆಗಬಾರದು, ಅಧಿಕಾರದಲ್ಲಿರಬಾರದು ಎನ್ನುವುದು ಬಿಜೆಪಿಯ ಪುರಾತನ ಸಿದ್ಧಾಂತ. ಅದಕ್ಕೇ ಯಾವುದೇ ತಪ್ಪಿಲ್ಲದಿದ್ದರೂ ನನ್ನ ವಿರುದ್ಧ ಭಾರಿ ಷಡ್ಯಂತ್ರ ರಚಿಸಿದ್ದಾರೆ. ಜನರ ಆಶೀರ್ವಾದ ನನ್ನ ಮೇಲೆ ಇರುವವರೆಗೂ ಷಡ್ಯಂತ್ರ ಗೆಲ್ಲುವುದಿಲ್ಲ ಎಂದು ಕಿಡಿಕಾರಿದರು.

ಬಾಗೋಜಿಕೊಪ್ಪ ಮಠದ ಶಿವಲಿಂಗ ಮುರುಘರಾಜೇಂದ್ರ ಸ್ವಾಮಿಗಳ ದಿವ್ಯ ಸಾನ್ನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ, ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ಮುಖ್ಯ ಸಚೇತಕರಾದ ಅಶೋಕ್ ಪಟ್ಟಣ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com