ಉಡುಪಿ: ಕಾರ್ಕಳದಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ರಕ್ತ ಪರೀಕ್ಷೆಯ ವರದಿ ಬಂದಿದ್ದು, ಆಕೆಯ ರಕ್ತದ ಮಾದರಿಯಲ್ಲಿ ಡ್ರಗ್ಸ್ ಅಂಶ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ಎಸ್.ಪಿ. ಡಾ. ಅರುಣ್ ಕೆ. ಅವರು ಮಾಹಿತಿ ನೀಡಿದ್ದು, ಸಂತ್ರಸ್ತ ಯುವತಿಯ ರಕ್ತ ಪರೀಕ್ಷೆಯ ವರದಿಯಲ್ಲಿ ಡ್ರಗ್ಸ್ ಅಂಶ ಇರುವುದು ಪತ್ತೆಯಾಗಿದೆ. ಆದರೆ, ಮೊದಲ ಆರೋಪಿ ಅಲ್ತಾಫ್‌ನ ರಕ್ತಪರೀಕ್ಷೆಯ ವರದಿ ಹಾಗೂ ಬಿಯರ್ ಬಾಟಲ್ ತಂದುಕೊಟ್ಟ ಎರಡನೇ ಆರೋಪಿ ಕ್ಸೇವಿಯರ್ ರಿಚರ್ಡ್‌ನ ರಕ್ತ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.
ಯುವತಿಯ ರಕ್ತದ ಮಾದರಿ ಪರೀಕ್ಷೆಯಲ್ಲಿ ಡ್ರಗ್ಸ್ ಅಂಶ ಪತ್ತೆಯಾಗಿರುವ ಕಾರಣ ಆರೋಪಿ ಅಲ್ತಾಫ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗ, ಆತ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿ ‘ಇದನ್ನೇ ಆ ಹುಡುಗಿಗೆ ನೀಡಿದ್ದು’ ಎಂದು ಹೇಳಿದ್ದಾನೆ. ಇದೀಗ ಆ ಪುಡಿಯನ್ನು ನಾವು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ, ಅದು ಯಾವ ಮಾದಕ ದ್ರವ್ಯ ಎಂಬುದನ್ನು ದೃಢೀಕರಿಸುತ್ತೇವೆ ಮತ್ತು ಅದನ್ನೇ ಹುಡುಗಿಗೆ ನೀಡಲಾಗಿತ್ತೇ ಎಂಬುದರ ಬಗ್ಗೆ ಕೂಡ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಯುವತಿಯ ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಅವರನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಿ, ಆದಷ್ಟು ಬೇಗನೆ ಈ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುತ್ತೇವೆ ಎಂದೂ ಇದೇ ವೇಳೆ ತಿಳಿಸಿದರು.
ಈ ನಡುವೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಸ್ಥಳ ಮಹಜರು ನಡೆಸಿದರು. ಪ್ರಕರಣ ಈಗಾಗಲೇ ಪ್ರಮುಖ ಆರೋಪಿ ಅಲ್ತಾಫ್ (34), ಮತ್ತೋರ್ವ ಆರೋಪಿ ಕ್ಸೇವಿಯರ್ ರಿಚರ್ಡ್ ಕ್ವಾಡ್ರಸ್ (35) ಎಂಬುವರನ್ನು ಬಂಧಿಸಲಾಗಿದ್ದು, ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಬಂಧಿತ ಆರೋಪಿಗಳನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಅತ್ಯಾಚಾರ ಪ್ರಕರಣವನ್ನು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಯಾವುದೇ ವ್ಯಕ್ತಿ ಅಪರಾಧದಲ್ಲಿ ತೊಡಗಿದ್ದರೂ ಅವರಿಗೆ ಶಿಕ್ಷೆಯಾಗುವುದು ಖಚಿತ. ಪೊಲೀಸರು ಯಾರನ್ನೂ ಬಿಡುವುದಿಲ್ಲ ಮತ್ತು ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆಂದು ಹೇಳಿದರು.
Advertisement