ಕೋಲಾರ: ಅನ್ಯ ಧರ್ಮಕ್ಕೆ ಸೇರಿದ ಮಹಿಳೆಯನ್ನು ಬೈಕ್ ನಲ್ಲಿ ಡ್ರಾಪ್ ಮಾಡಿದ್ದಕ್ಕಾಗಿ ವ್ಯಕ್ತಿಯೋರ್ವನಿಗೆ ಇಬ್ಬರು ಅಪರಿಚಿತರು ಬೆದರಿಕೆ ಹಾಕಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಆಗಸ್ಟ್ 18 ರಂದು ಘಟನೆ ನಡೆದಿದ್ದು, ಶಿವರಿಪಟ್ಟಣದ ವಿಷ್ಣು ಎಂಬುವರು ಸೋಮವಾರ ಮಾಲೂರು ತಾಲ್ಲೂಕಿನ ಕೋಲಾರ ಟೌನ್ ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ವಿಷ್ಣುಗೆ ಮಹಿಳೆಯ ಪರಿಚಯವಿದ್ದು, ಅವರು ತನ್ನ ಕ್ಲಾಸ್ ಮೇಟ್ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕೋಲಾರದಲ್ಲಿ ಆಕೆಯನ್ನು ನೋಡಿದಾಗ ಅಂತರಗಂಗೆಯಲ್ಲಿ ತನ್ನ ಸ್ನೇಹಿತರಿದ್ದು, ಅಲ್ಲಿಗೆ ಡ್ರಾಪ್ ಮಾಡುವಂತೆ ಮಹಿಳೆ ಕೇಳಿಕೊಂಡಿದ್ದಾಳೆ. ನಂತರ ಅಲ್ಲಿಗೆ ತಲುಪಿದಾಗ ಅಲ್ಲಿ ಯಾರು ಇರಲಿಲ್ಲ. ಮತ್ತೆ ಅವರನ್ನು ಡ್ರಾಪ್ ಮಾಡುವಾಗ ಆಕೆಯ ಧರ್ಮಕ್ಕೆ ಸೇರಿದ ಇಬ್ಬರು ಅಪರಿಚಿತರು ಬೆದರಿಕೆ ಹಾಕಿದ್ದಾರೆ. ನಂತರ ಬಸ್ ನಿಲ್ದಾಣದಲ್ಲಿ ಆಕೆಯನ್ನು ಬಿಟ್ಟು ಬಂದಿದ್ದಾಗಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೋಷಕರೊಂದಿಗೆ ಚರ್ಚಿಸಿದ ನಂತರ ದೂರು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement