ಬೆಂಗಳೂರು: ಬೆಂಗಳೂರಿನ ಇಂದಿರಾನಗರದಲ್ಲಿ ಹಾಡಹಗಲೇ ಜನನಿಬಿಡ ರಸ್ತೆಗಳಲ್ಲಿ ನಿಲ್ಲಿಸಿದ್ದ ಕಾರುಗಳ ಕಿಟಕಿಗಳನ್ನು ಒಡೆದ ಕಳ್ಳರು ಲ್ಯಾಪ್‌ಟಾಪ್ ಮತ್ತು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿದ್ದಾರೆ.
ಎಕ್ಸ್ ನಲ್ಲಿ ಬಳಕೆದಾರರೊಬ್ಬರು ಈ ಬಗ್ಗೆ ಪೋಸ್ಟ್ ವೊಂದನ್ನು ಅಪ್ಲೋಡ್ ಮಾಡಿದ್ದು, 'ಆಗಸ್ಟ್ 22 ರಂದು, ರಾತ್ರಿ 7:30 ರ ಸುಮಾರಿಗೆ ಗ್ಲೋಬಲ್ ದೇಸಿ ಸ್ಟೋರ್ ಮತ್ತು ವೆಸ್ಟ್‌ಸೈಡ್ ಬಳಿ ಜನನಿಬಿಡ ಇಂದಿರಾ ನಗರ ಮುಖ್ಯ 100 ಅಡಿ ರಸ್ತೆಯಲ್ಲಿ 4 ಕಾರುಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ಎಲ್ಲಾ 4 ಕಾರುಗಳ ಗಾಜುಗಳನ್ನು ಒಡೆದ ಕಳ್ಳರು, ಲ್ಯಾಪ್‌ಟಾಪ್‌ಗಳು ಮತ್ತು ಬೆಲೆಬಾಳುವ ವಸ್ತುಗಳನ್ನು 3 ಬ್ಯಾಗ್‌ಗಳನ್ನು ದೋಚಿದ್ದಾರೆ. ಈ ನಾಲ್ಕು ಕಾರುಗಳಲ್ಲಿ ನನ್ನದೂ ಒಂದು ಕಾರಿತ್ತು ಎಂದು ಸಂತ್ರಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಳ್ಳರ ಕೈಚಳಕವನ್ನು ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳು ಸೆರೆ ಮಾಡಿದ್ದು, ಕಾರಿನ ಕಿಟಕಿಗಳನ್ನು ವಿಶೇಷ ಸಾಧನಗಳನ್ನು ಬಳಸಿ ಕಳ್ಳರು ಸದ್ದೇ ಇಲ್ಲದೆ ಒಡೆದಿದ್ದಾರೆ. ಬಳಿಕ ಕಾರಿನೊಳಗಿದ್ದ ವಸ್ತುಗಳನ್ನು ಲಪಟಾಯಿಸಿದ್ದಾರೆ. ಇವಿಷ್ಟೂ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳರು ಭದ್ರತಾ ಸಿಬ್ಬಂದಿಯ ಗಮನ ಬೇರೆಡೆ ಸೆಳೆಯುವ ದೃಶ್ಯವೂ ದಾಖಲಾಗಿದೆ.
Advertisement