ಬೆಂಗಳೂರು: ಸೆಪ್ಟೆಂಬರ್ ಆರಂಭದಲ್ಲಿ ನಡೆಯುವ ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಶುಕ್ರವಾರ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಧ್ವನಿವರ್ಧಕ, ದೀಪಾಲಂಕಾರ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆ ನಡೆಸಲು ಆಯಾ ಪೊಲೀಸ್ ಠಾಣೆಯಿಂದ ಆಯೋಜಕರು ಅನುಮತಿ ಪಡೆಯಬೇಕು. ಧ್ವನಿವರ್ಧಕಗಳನ್ನು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಬಳಸಬಹುದಾಗಿದೆ.
ಸಾರ್ವಜನಿಕರು ಮತ್ತು ಸಂದರ್ಶಕರ ಸುರಕ್ಷತೆ ಖಾತ್ರಿಗೆ ವಿಗ್ರಹ ಪ್ರತಿಷ್ಠಾಪಿಸುವ ಸಾರ್ವಜನಿಕ ಸ್ಥಳದಲ್ಲಿ 24 ಗಂಟೆಗಳ ಮೇಲ್ವಿಚಾರಣೆಗಾಗಿ ಇಬ್ಬರನ್ನು ನಿಯೋಜಿಸಬೇಕು. ಸಿಸಿಟಿವಿ ಕ್ಯಾಮೆರಾ ಬಳಕೆ, ಅಗ್ನಿಶಾಮಕ ಸಾಧನ ಪ್ರದರ್ಶನ ಮತ್ತು ಹತ್ತಿರದ ಪೊಲೀಸ್ ಮತ್ತು ಅಗ್ನಿಶಾಮಕ ಠಾಣೆಗಳ ಸಂಪರ್ಕ ಸಂಖ್ಯೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ. ಪೆಂಡಲ್‌ಗಳಲ್ಲಿ ಹಗಲು ರಾತ್ರಿ ಸರಿಯಾಗಿ ಬೆಳಕು ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟಕರ ಮೇಲಿದೆ. ಎಲ್ಲಾ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳನ್ನು ಶಾಂತಿಯುತವಾಗಿ ನಡೆಸಬೇಕು ಮತ್ತು ಡಿಜೆ ಧ್ವನಿ ವ್ಯವಸ್ಥೆಗಳನ್ನು ನಿಷೇಧಿಸಲಾಗಿದೆ.
ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಜನದಟ್ಟಣೆ ನಿಯಂತ್ರಣ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೇ ಬ್ಯಾರಿಕೇಡ್‌ಗಳ ವ್ಯವಸ್ಥೆ ಮತ್ತು ಸ್ವಯಂಸೇವಕರನ್ನು ನಿಯೋಜಿಸಬೇಕು. ಗುರುತಿನ ಚೀಟಿಗಳು, ಬ್ಯಾಡ್ಜ್‌ಗಳು, ಟೀ ಶರ್ಟ್‌ಗಳು ಅಥವಾ ಕ್ಯಾಪ್‌ಗಳನ್ನು ಧರಿಸಿದ ಸ್ವಯಂ ಸೇವಕರನ್ನು ಸುಲಭವಾಗಿ ಗುರುತಿಸುವಂತಿರಬೇಕು. ಮೆರವಣಿಗೆಯ ಮಾರ್ಗವನ್ನು ಪೊಲೀಸರಿಗೆ ಮುಂಚಿತವಾಗಿ ತಿಳಿಸಬೇಕು ಮತ್ತು ಕೊನೆಯ ಕ್ಷಣದಲ್ಲಿ ಬದಲಾಯಿಸಬಾರದು. ರಾತ್ರಿ 10 ಗಂಟೆಯೊಳಗೆ ಗಣೇಶ ವಿಸರ್ಜನೆ ಮೆರವಣಿಗೆ ಮುಗಿಯಬೇಕು.
Advertisement