ಬೆಂಗಳೂರು: ಹಾಸನದಲ್ಲಿ ಡಿ.5 ರಂದು ಸ್ವಾಭಿಮಾನಿ ಸಮಾವೇಶ ನಡೆಯಲಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಭಾನುವಾರ ಮಹತ್ವದ ಸಭೆ ನಡೆಯಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದ್ದು, ಹಳೇ ಮೈಸೂರು ಭಾಗದ ವಿವಿಧ ಮುಖಂಡರು, ಸಚಿವರು, ಸಂಸದರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ನಡುವೆ ಹಾಸನದಲ್ಲಿ ಸಮಾವೇಶಕ್ಕೆ ಕೆಲ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆಂದು ಮೂಲಗಳು ತಿಳಿಸಿವೆ.
ಆದರೆ, ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಮಾವೇಶಕ್ಕೆ ಒಪ್ಪಿಗೆ ಪಡೆದಿದ್ದಾರೆಂದು ತಿಳಿದುಬಂದಿದೆ. ಇತ್ತೀಚಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಫಲಿತಾಂಶ ಬೆನ್ನಲ್ಲೇ ಸಮಾವೇಶ ನಡೆಸುತ್ತಿರುವುದು ಪಕ್ಷದ ಶಕ್ತಿಯ ಪ್ರದರ್ಶನವಾಗಲಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಸಮಾವೇಶ ಸಿದ್ಧತೆ ಬಗ್ಗೆ ವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸೂಚಿಸಿದ್ದಾರೆ.
ಪಕ್ಷದ ವೇದಿಕೆ ಅಡಿಯಲ್ಲೇ ಸ್ವಾಭಿಮಾನಿ ಸಮಾವೇಶ ನಡೆಯಬೇಕು. ಈ ಬಗ್ಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಸಮಾವೇಶ ಯಶಸ್ವಿಗೊಳಿಸುವ ಬಗ್ಗೆ ಗಮನ ನೀಡಿ ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ. ಹಿಂದುಳಿದ ವರ್ಗಗಳ ಜೊತೆ ಸೇರಿ ಕಾಂಗ್ರೆಸ್ ಈ ಸಮಾವೇಶ ನಡೆಸಲಿದೆ.
Advertisement