
ಬೆಂಗಳೂರು: ಚಂಡಮಾರುತದ ಪ್ರಭಾವ ಶನಿವಾರದಿಂದ ರಾಜಧಾನಿ ಬೆಂಗಳೂರಿನಲ್ಲಿ ಆರಂಭಗೊಂಡಿರುವ ಮಳೆ ಭಾನುವಾಹ ಹಾಗೂ ಸೋಮವಾರವೂ ಮುಂದುವರೆದಿದ್ದು, ಜಿಟಿ-ಜಟಿ ಮಳೆ, ಮೋಡ ಮುಸುಕಿನ ವಾತಾವರಣ, ಮೈಕೊರೆವ ಚಳಿ ಸೃಷ್ಟಿಯಾಗಿದೆ.
ಫೆಂಗಲ್ ಚಂಡಮಾರುತದಿಂದಾಗಿ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಬೆಂಗಳೂರು ನಗರ ಮತ್ತು ಗ್ರಾಮಾಂತರ ಮತ್ತು ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಮಂಗಳವಾರದವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಮುಂದಿನ 48 ಗಂಟೆಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಸಾಧಾರಣದಿಂದ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಮುಂದಿನ 48 ಗಂಟೆಗಳಲ್ಲಿ ಹವಾಮಾನವು ತೀವ್ರವಾಗಿ ಬದಲಾಗುವ ನಿರೀಕ್ಷೆಯಿದೆ ಮತ್ತು ಚಂಡಮಾರುತದ ಪರಿಣಾಮ ಬುಧವಾರದವರೆಗೆ ಇರಲಿದ್ದು, ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ತಿಳಿಸಿದೆ.
ಈ ನಡುವೆ ಜಿಲ್ಲೆಯಾದ್ಯಂತ ನಿರಂತರ ಮಳೆಯ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ತಾಪಮಾನ ಇಳಿಕೆ
ಚಂಡಮಾರುತದ ಪರಿಣಾಮ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ವಾರವಿಡೀ, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಗರಿಷ್ಠ ತಾಪಮಾನವು ಸುಮಾರು 22 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 19 ಡಿಗ್ರಿ ಸೆಲ್ಸಿಯಸ್ ಇರವಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ವಾರವಿಡೀ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕಳೆದ ಮೂರು ದಿನಗಳಲ್ಲಿ, ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನವು 16 ಡಿಗ್ರಿ ಸೆಲ್ಸಿಯಸ್‌ನಿಂದ 19 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ, ಇದು ಚಳಿಗಾಲದ ಆರಂಭವನ್ನು ಸೂಚಿಸುತ್ತದೆ ಎಂದು ಐಎಂಡಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಚಳಿಗಾಲವು ಡಿಸೆಂಬರ್ ಮಧ್ಯದಿಂದ ಫೆಬ್ರವರಿ ಆರಂಭದವರೆಗೆ ಇರುತ್ತದೆ, ಆದರೆ, ಈ ವರ್ಷ ಚಳಿಗಾಲ ಬೇಗನೆ ಆರಂಭವಾಗಿದೆ. ಹೀಗಾಗ ಈ ಬಾರಿ ಚಳಿ ವಾತಾವರಣ ತೀವ್ರವಾಗಿರುತ್ತದೆ ಎಂದು ತಿಳಿಸಿದ್ದಾರೆ
Advertisement