
ವಿಜಯಪುರ: ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಐವರು ದುರ್ಮರಣ ಹೊಂದಿದ್ದಾರೆ. ಕಬ್ಬು ಕಟಾವು ಮಷಿನ್ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ.
ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.
ಯಾದಗಿರಿಯಲ್ಲಿ ಕನ್ಯೆ ನೋಡಲು ಹೋಗಿದ್ದು, ವಾಪಸ್ ಆಗುತ್ತಿದ್ದ ವೇಳೆ ತೊಗರಿ ಕಟಾವು ಮಷಿನ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೆಸಿಬಿ ಮೂಲಕ ಕಾರಿನಲ್ಲಿದ್ದ ಶವಗಳನ್ನು ಹೊರತೆಗೆಯಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Advertisement