'ನಿನ್ನನ್ನು ಸುಮ್ನೆ ಬಿಡಲ್ಲ': ದುಪ್ಪಟ್ಟು ಹಣ ನೀಡುವಂತೆ ವಿದ್ಯಾರ್ಥಿ ಮೇಲೆ ಆಟೋ ಚಾಲಕನ ದರ್ಪ; ವಿಡಿಯೋ ವೈರಲ್‌..!

ಚಾಲಕನ ಈ ಹುಚ್ಚಾಟದ ವಿಡಿಯೋವನ್ನು ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ದುರ್ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಆಟೋ ಚಾಲಕ
ಆಟೋ ಚಾಲಕ
Updated on

ಬೆಂಗಳೂರು: ದೇಶದ ಹೈಟೆಕ್ ಉದ್ಯಮ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಆಟೋಗಳು ಬಡವರ ರಥ ಎಂದೆನಿಸಿಕೊಂಡಿದ್ದವು. ಆದರೆ, ಈಗ ನಗರದಲ್ಲಿ ಆಟೋ ಚಾಲಕರದ್ದೇ ದರ್ಬಾರ್ ನಡೆಯುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ದುಪ್ಪಟ್ಟು ಹಣ ನೀಡುವಂತೆ ಆಟೋ ಚಾಲಕನೊಬ್ಬ ವಿದ್ಯಾರ್ಥಿಯೋರ್ವನಿಗೆ ಬೆದರಿಕೆ ಹಾಕಿ, ದರ್ಪ ತೋರಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಗರದ ಖಾಸಗಿ ಕಂಪೆನಿಯೊಂದರಲ್ಲಿ ಇಂಟರ್ನ್ಶಿಪ್ ಮುಗಿಸಿ ವಾಪಸ್ ಆಗುವ ವೇಳೆ 20ವರ್ಷದ ಯುವಕನೋರ್ವ ನಮ್ಮ ಯಾತ್ರಿ ಆ್ಯಪ್ ಮೂಲಕ ಬೆಳ್ಳಂದೂರಿನಿಂದ ಮೈಲಸಂದ್ರಕ್ಕೆ ಆಟೋ ಬುಕ್ ಮಾಡಿದ್ದಾನೆ. ಈ ವೇಳೆ ಆ್ಯಪ್ ನಲ್ಲಿ 380 ರೂಪಾಯಿ ತೋರಿಸಿದೆ.

ಚಾಲಕ 50 ರೂಪಾಯಿ ಹೆಚ್ಚಾಗಿ ನೀಡುವಂತೆ ಸೂಚಿಸಿದ್ದಾನೆ. ಇದಕ್ಕೆ ಒಪ್ಪಿದ ವಿದ್ಯಾರ್ಥಿ, ಆಟೋ ಹತ್ತಿ ಮನೆಗೆ ಬಂದಿದ್ದಾನೆ. ಈ ವೇಳೆ 380 ರ ಜೊತೆಗೆ 50 ರೂಪಾಯಿ ಹೆಚ್ಚಿಗೆ ನೀಡಲು ಮುಂದಾದಾಗ 500 ರೂಪಾಯಿ ನೀಡುವಂತೆ ಕೇಳಿದ್ದಾರೆ. ಇದಕ್ಕೆ ವಿದ್ಯಾರ್ಥಿ ಹಿಂದೇಟು ಹಾಕಿದಾಗ ಆತನ ಮೇಲೆ ಅವ್ಯಾಚ್ಯ ಪದಗಳಿಂದ ನಿಂದಿಸಿ, ತನ್ನಿಬ್ಬರು ಕುಡುಕ ಸ್ನೇಹಿತರನ್ನು ಕರೆಸಿ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅಲ್ಲದೆ, ವಿದ್ಯಾರ್ಥಿ ಕೆಲಸ ಮಾಡುವ ಸ್ಥಳ ತಿಳಿದಿದ್ದು, ಅಲ್ಲಿಗೆ ಬಂದು ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಬೆದರಿಕೆಗೆ ಹೆದರಿದ ವಿದ್ಯಾರ್ಥಿ ತನ್ನ ಬಳಿ ಇದ್ದ ರೂ.400 ನೀಡಿ, ರೂ.100ನ್ನು ಯುಪಿಐ ಮೂಲಕ ಪಾವತಿ ಮಾಡಿದ್ದಾನೆ.

ಚಾಲಕನ ಈ ಹುಚ್ಚಾಟದ ವಿಡಿಯೋವನ್ನು ವಿದ್ಯಾರ್ಥಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಆಟೋ ಚಾಲಕನ ದುರ್ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜನಾಂಗೀಯ ನಿಂದನೆ ಕೂಡ ಮಾಡಿದ್ದಾನೆಂದು ಆರೋಪಿಸಿದ್ದಾರೆ. ಈ ಪೋಸ್ಟ್ ನ್ನು ಬೆಂಗಳೂರು ನಗರ ಪೊಲೀಸರು ಹಾಗೂ ನಮ್ಮಯಾತ್ರಿ ಆಟೋ ಸಂಸ್ಥೆಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಆಟೋ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ನಮ್ಮ ಯಾತ್ರಿ ಆಟೋ ಸಂಸ್ಥೆ ಪ್ರತಿಕ್ರಿಯೆ ನೀಡಿದ್ದು, ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ಚಾಲಕನ ದುರ್ವರ್ತನೆ ಒಪ್ಪಲು ಸಾಧ್ಯವಿಲ್ಲ. ನಿಮ್ಮ ಸುರಕ್ಷತೆ ಮತ್ತು ಸೌಕರ್ಯವು ನಮಗೆ ಅತ್ಯುನ್ನತವಾದದ್ದು. ಈ ರೀತಿಯ ಘಟನೆಗಳು ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆಯನ್ನು ನಾವು ನೀಡುತ್ತೇವೆ. ನಿಮಗೆ ಸಹಾಯ ಬೇಕಿದ್ದಲ್ಲಿ, ನಮಗೆ ನೇರವಾಗಿ ಸಂದೇಶ ಕಳುಹಿಸಿ ಎಂದು ಹೇಳಿದೆ.

ಆಟೋ ಚಾಲಕ
ಬೆಂಗಳೂರು: ಓಲಾ ಆಟೋ ಚಾಲಕನಿಂದ ಯುವತಿ ಮೇಲೆ ಹಲ್ಲೆ ಆರೋಪ, ವಿಡಿಯೋ ವೈರಲ್

ನಗರದಲ್ಲಿ ಬಿಎಂಟಿಸಿ, ಮೆಟ್ರೋ ಸಂಪರ್ಕವಿಲ್ಲದ ಸ್ಥಳಗಳಲ್ಲಿ ಹಾಗೂ ತುರ್ತು ಸಂದರ್ಭಗಳಲ್ಲಿ ಬಡ, ಮಧ್ಯಮ ವರ್ಗದ ಹೆಚ್ಚಿನ ಜನರು ಆಟೋಗಳ ಮೇಲೆ ಅವಲಂಬಿತರಾಗಿದ್ದು, ಈ ಸ್ಥಳಗಳಲ್ಲಿ ಆಟೋ ದರ್ಬಾರ್ ಹೆಚ್ಚಾಗಿದೆ. ಇಲ್ಲಿ ಆಟೋ ಚಾಲಕರು ಕೇಳಿದಷ್ಟು ಹಣ ನೀಡದಿದ್ದರೆ ಸಂಕಷ್ಟ ಎದುರಿಸಬೇಕಾಗಿದೆ.

ಸಾರಿಗೆ ಇಲಾಖೆ ನಿಯಮದ ಪ್ರಕಾರ ಆಟೋ ಚಾಲಕರು ಪ್ರಯಾಣಿಕರು ಕರೆದ ಕಡೆ ಹೋಗಬೇಕು. ಮೀಟರ್‌ ದುಡ್ಡಿಗಿಂತ ಹೆಚ್ಚಿನ ಹಣ ಪ್ರಯಾಣಿಕರಿಂದ ಪಡೆಯಬಾರದು. ಹಾಗೆಯೇ, ಸಂಚಾರ ನಿಯಮ ಪಾಲನೆ ಕಡ್ಡಾಯವಾಗಿದೆ. ಆದರೆ, ಈ ಮೂರು ನಿಯಮಗಳೇಂದರೆ ಆಟೋ ಚಾಲಕರಿಗೆ ಅಸಡ್ಡೆಯಾಗಿ ಹೋಗಿದೆ.

ನಗರದಲ್ಲಿ ಲಕ್ಷಗಟ್ಟಲೆ ಆಟೋಗಳಿದ್ದರೂ, ಪ್ರಯಾಣಿಕರು ಕರೆದಲ್ಲಿಗೆ ಬರುತ್ತಿಲ್ಲ. ಆಟೋ ಚಾಲಕರು ಹೋಗುವ ಕಡೆಗೆ ಪ್ರಯಾಣಿಕರು ತೆರಳಬೇಕಾದ ಪರಿಸ್ಥಿತಿ ಇದೆ.

ಈ ಹಿಂದೆ ಆಟೋಗಳಿಗೆ ಕನಿಷ್ಠ ಚಾರ್ಜ್ ರೂ.25 ಇತ್ತು. ಸದ್ಯ ಈ ದರವನ್ನು ಹೆಚ್ಚಿಸಲಾಗಿದ್ದು, ರೂ.30 ನಿಗದಿಯಾಗಿದೆ. ಜೊತೆಗೆ ಈ ಹಿಂದೆ ಒಂದು ಕಿ.ಮೀಗೆ ರೂ.13 ಮೀಟರ್ ಮುಖಾಂತರ ಪಡೆದುಕೊಳ್ಳಲಾಗುತ್ತಿತ್ತು. ಇದೀಗ, ಮೀಟರ್ ದರವನ್ನು ರೂ.2 ಏರಿಕೆ ಮಾಡಿ, ಒಂದು ಕಿ.ಮೀಗೆ ರೂ.15 ಪಡೆಯಲಾಗುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕನಿಷ್ಠ 2 ಕಿ.ಮೀ ಪ್ರಯಾಣಕ್ಕೆ ರೂ.30 ಹಾಗೂ ನಂತರ ಪ್ರತಿ ಕಿ.ಮೀಗೆ ರೂ.15 ಪಡೆಯಬೇಕು. ಒಂದು ವೇಳೆ, ಮೀಟರ್‌ ಹಾಕದೇ ಹೆಚ್ಚಿನ ಹಣ ಪಡೆದರೆ, ಅಂತಹ ಆಟೋಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆದೇಶಿಸಿದೆ. ಆದರೆ, ಅದು ಕಾಗದಕ್ಕೆ ಮಾತ್ರ ಸೀಮಿತವಾಗಿದೆ. ಕೆಲ ಆಟೋ ಚಾಲಕರು, 2 ಕಿ.ಮೀ ವ್ಯಾಪ್ತಿಗೂ ರೂ.80 ನಿಂದ ರೂ,100 ವರೆಗೆ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಆಟೋ ಚಾಲಕರ ದರ್ಬಾರ್‌ಗೆ ಕಡಿವಾಣ ಹಾಕುವಂತೆ ಒತ್ತಾಯಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com