
ಬೆಂಗಳೂರು: ದಕ್ಷಿಣ ಬೆಂಗಳೂರಿನ ಸಾರಕ್ಕಿ ಬಸ್ ನಿಲ್ದಾಣವು ಕಸದ ತೊಟ್ಟಿಯಾಗಿ ಮಾರ್ಪಟ್ಟಿದ್ದು, ಕಸದ ರಾಶಿಯಿಂದ ಬರುವ ದುರ್ನಾತಕ್ಕೆ ನಿತ್ಯವೂ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ಎದುರಾಗಿದೆ.
ಸಮೀಪದ ಇರುವ ಮಾರುಕಟ್ಟೆಗಳಿಂದ ತರಕಾರಿ ಮತ್ತು ಇತರ ತ್ಯಾಜ್ಯಗಳನ್ನು ಬಸ್ ನಿಲ್ದಾಣಕ್ಕೆ ತಂದು ಸುರಿಯಲಾಗುತ್ತಿದ್ದು, ಈ ತ್ಯಾಜ್ಯದಿಂದ ಹೊರಸೂಸುವ ದುರ್ವಾಸನೆಯಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ದುರ್ವಾಸನೆ ಸಹಿಸಲಾಗದೆ ಪ್ರಯಾಣಿಕರು ರಸ್ತೆಬದಿ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಹಲವಾರು ಪ್ರಯಾಣಿಕರು ನಿತ್ಯ ಬಿಎಂಟಿಸಿ ಬಸ್ ಬಳಸುವುದರಿಂದ ಸಾರಕ್ಕಿ ಬಸ್ ನಿಲ್ದಾಣದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಮೂರು ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಜೆಪಿ ನಗರ ಮೆಟ್ರೋ ನಿಲ್ದಾಣದ ಪಕ್ಕದಲ್ಲಿ ಒಂದು ಬದಿಯಲ್ಲಿ ಮೂರು ಮತ್ತು ಮತ್ತೊಂದು ಬದಿಯಲ್ಲಿ ಎರಡು ಬಸ್ ಶೆಲ್ಟರ್‌ಗಳಿವೆ. ಸಮೀಪವೇ ಮಾರುಕಟ್ಟೆಗಳಿದ್ದು, ಮಾರಾಟಗಾರರು ಬಸ್ ನಿಲ್ದಾಣದಲ್ಲಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಬಸ್ ನಿಲ್ದಾಣ ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಬಿಎಂಟಿಸಿ ಬಸ್ ಪ್ರಯಾಣಿಕ ರಮೇಶ್ ಎಂಬುವವರು ಮಾತನಾಡಿ, ಕಸದ ಸಮಸ್ಯೆಯಿಂದಾಗಿ ಬಸ್ ನಿಲ್ದಾಣಗಳು ಹೆಚ್ಚಾಗಿ ಬಳಕೆಯಾಗದಂತಾಗಿದೆ. ದುರ್ವಾಸನೆಯಿಂದಾಗಿ ಹಲವು ಪ್ರಯಾಣಿಕರು ಸುರಕ್ಷತೆ ಬದಿಗೊತ್ತಿ ರಸ್ತೆಬದಿ ನಿಲ್ಲುತ್ತಿದ್ದಾರೆ. ಮಾರುಕಟ್ಟೆಯ ವ್ಯಾಪಾರಸ್ಥರು ತ್ಯಾಜ್ಯವನ್ನು ಬಸ್ ನಿಲ್ದಾಣ, ರಸ್ತಗಳಲ್ಲಿ ಎಸೆಯುತ್ತಿದ್ದಾರೆ. ಇದು ದೈನಂದಿನ ಪ್ರಯಾಣಿಕರ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.
ಇದಲ್ಲದೆ, ಬಸ್ ನಿಲ್ದಾಣದ ಬಳಿಕ ಹಲವರು ತಮ್ಮ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಾರೆ. ಇದರಿಂದ ಬಸ್ ಬರುವುದು ಗೊತ್ತಾಗುವುದೇ ಇಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ರಸ್ತೆಯಲ್ಲಿ ನಿಲ್ಲಬೇಕಾಗುತ್ತಿದೆ. ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮತ್ತೊಬ್ಬ ಪ್ರಯಾಣಿಕರಾದ ನೀತು ಎಂಬುವವರು ಮಾತನಾಡಿ, ಕಸದ ಸಮಸ್ಯೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ರಾತ್ರಿ ವೇಳೆಯಂತೂ ಪರಿಸ್ಥಿತಿ ಮತ್ತಷ್ಟು ಕೆಟ್ಟದಾಗಿರುತ್ತದೆ. ಬಸ್ ನಿಲ್ದಾಣವು ನಿರಾಶ್ರಿತರ ಹಾಗೂ ಮದ್ಯಪಾನ ಮಾಡುವವರ ತಾಣವಾಗಿ ಹೋಗಿದೆ, ಇದು ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರ ಮಾರಾಟಗಾರರಿಗೆ ನೈರ್ಮಲ್ಯದ ಬಗ್ಗೆ ತಿಳುವಳಿಕೆ ನೀಡಬೇಕು. ಈ ಪ್ರದೇಶದಲ್ಲಿ ಮಾರುಕಟ್ಟೆ ಇರುವುದರಿಂದ ಬಿಬಿಎಂಪಿ ಹೆಚ್ಚಿನ ಸಂಖ್ಯೆಯ ಕಸದ ತೊಟ್ಟಿಗಳನ್ನು ಸ್ಥಾಪಿಸಬೇಕು. ಈ ಸಮಸ್ಯೆ ಸಾರಕ್ಕಿ ಬಸ್ ನಿಲ್ದಾಣದಲ್ಲಿ ಅಷ್ಟೇ ಅಲ್ಲದೆ, ಸಾರಕ್ಕಿ ಸಮೀಪದ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿಯೂ ಇದೆ ಎಂದು ತಿಳಿಸಿದರು.
ಮಾರುಕಟ್ಟೆ ಬಳಿ ಇರುವ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ ಜೀತು ಪಟೇಲ್ ಅವರು ಮಾತನಾಡಿ, ಅಸಮರ್ಪಕ ತ್ಯಾಜ್ಯ ವಿಲೇವಾರಿ ಪ್ರಮುಖ ಸಮಸ್ಯೆಯಾಗಿದೆ. ಮಾರುಕಟ್ಟೆ ಬಳಿ ಸರಿಯಾದ ತ್ಯಾಜ್ಯ ನಿರ್ವಹಣೆ ಇಲ್ಲದೇ ಇರುವುದರಿಂದ ವ್ಯಾಪಾರಿಗಳು ಕಸವನ್ನು ರಸ್ತೆಗೆ ಎಸೆಯುತ್ತಿದ್ದಾರೆ. ಇದರಿಂದ ಬಸ್ ನಿಲ್ದಾಣಗಳಲ್ಲಿ ದುರ್ವಾಸನೆ ಬೀರುತ್ತಿದೆ ಎಂದು ಹೇಳಿದರು. ಈ ಸಂಬಂಧ ಪ್ರತಿಕ್ರಿಯಿಸಲು ಬಿಬಿಎಂಪಿ ಅಧಿಕಾರಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ.
Advertisement