
ಬೆಂಗಳೂರು: ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ವಿಭಾಗ ಮಂಗಳವಾರ ತನ್ನ 264 ನೇ ಕಾರ್ಪ್ಸ್ ದಿನವನ್ನು ಐತಿಹಾಸಿಕ ಗಿನ್ನೆಸ್ ದಾಖಲೆ ಮೂಲಕ ಆಚರಿಸಿದೆ.
ಹೌದು.. ಭಾರತೀಯ ಸೇನೆಯ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ವಿಭಾಗದ ಟಾರ್ನೆಡೋಸ್ ಎಂದು ಕರೆಯಲಾಗುವ ಎಎಸ್‌ಸಿ ಮೋಟಾರ್ ಸೈಕಲ್ ಡಿಸ್ಪ್ಲೇ ಟೀಮ್ ಮಂಗಳವಾರ ಒಂದೇ ದಿನದಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದು, ಆ ಮೂಲಕ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಸ್ಥಾಪಿಸಿದ್ದಾರೆ.
ಎಎಸ್‌ಸಿ ಸೆಂಟರ್ ಕಾಲೇಜು ಮತ್ತು ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಈ ಕಾರ್ಯಕ್ರಮವು ಕಾರ್ಪ್ಸ್ ಪರಂಪರೆಗೆ ಸೂಕ್ತವಾದ ಗೌರವವಾಗಿದ್ದು, ಕರ್ನಾಟಕ ಜಂಟಿ ಆಯುಕ್ತರು ಸೇರಿದಂತೆ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ಟೊರ್ನಾಡೋಸ್ ತಂಡ ನಿಖರತೆ, ಶಿಸ್ತು ಮತ್ತು ಶ್ರೇಷ್ಠತೆಯ ನಿರಂತರ ಅನ್ವೇಷಣೆಯನ್ನು ಸಂಯೋಜಿಸಿದ ಬೈಕ್ ಸಾಹಸಗಳನ್ನು ಪ್ರದರ್ಶಿಸಿತು.
3 ವಿಶ್ವ ದಾಖಲೆ
ಈ ವೇಳೆ ಟಾರ್ನೆಡೋಸ್ ತಂಡ ಮೂರು ವಿಶ್ವ ದಾಖಲೆ ನಿರ್ಮಿಸಿದ್ದು, ದಿನದ ಮೊದಲ ದಾಖಲೆಯನ್ನು ಸುಬೇದಾರ್ ಪ್ರದೀಪ್ ಎಸ್‌ಎಸ್ ಅವರು ಸ್ಥಾಪಿಸಿದರು. ಅವರು ಮೋಟಾರ್ ಸೈಕಲ್‌ನಲ್ಲಿ ಹಿಮ್ಮುಖವಾಗಿ ಕುಳಿತು ಅಸಾಧಾರಣ 361.56 ಕಿಲೋಮೀಟರ್‌ಗಳನ್ನು ಕ್ರಮಿಸಿದ್ದು, ಆ ಮೂಲಕ ಅತಿ ಉದ್ದದ ಹಿಮ್ಮುಖ ಸವಾರಿ ಮಾಡಿದ ಸಾಹಸಿ ಎಂಬ ಕೀರ್ತಿಗೆ ಭಾಜನರಾದರು.
2ನೇ ದಾಖಲೆ ಹವಾಲ್ದಾರ್ ಮನೀಶ್ ಅವರ ಪಾಲಾಗಿದ್ದು, ಅವರು ಮೊಟಾರ್ ಬೈಕ್ ಮೇಲೆ ಕುಳಿತು ಕೈಗಳ ಸಹಾಯವಿಲ್ಲದೇ ಬರೊಬ್ಬರಿ 2,349 ಮೀಟರ್‌ಗಳಷ್ಟು ದೂರ ಸಾಗಿ ಅತೀ ಉದ್ದದ ಹ್ಯಾಂಡ್ಸ್-ಫ್ರೀ ವೀಲಿ ಮಾಡಿದ ಸಾಹಸಿ ಎಂಬ ಕೀರ್ತಿ ಗಳಿಸಿದರು.
ಮತ್ತೊಂದು ಸಾಧನೆಯಲ್ಲಿ ಸಿಪಾಯಿ ಸುಮಿತ್ ತೋಮರ್ ಅವರು 1,715.4 ಮೀಟರ್‌ಗಳ ದೂರ ಬೈಕ್ ಮೇಲೆ ನಿಂತು ಚಲಿಸುವ ಮೂಲಕ ಅತೀ ಉದ್ದ ನೋ-ಹ್ಯಾಂಡ್ಸ್ ವೀಲಿ ಮಾಡಿದ ಸಾಹಿಸಿ ಎಂಬ ಕೀರ್ತಿಗೆ ಭಾಜನರಾದರು.
ಆ ಮೂಲಕ ಈ ಮೂವರು ಒಂದೇ ದಿನ ಆರ್ಮಿ ಸರ್ವಿಸ್ ಕಾರ್ಪ್ಸ್ (ಎಎಸ್‌ಸಿ) ಪರ ಮೂರು ವಿಶ್ವದಾಖಲೆ ನಿರ್ಮಿಸಿದ್ದಾರೆ.
Advertisement