MUDA ಹಗರಣ: ತನಿಖಾ ವರದಿ ಹೈಕೋರ್ಟ್'ಗೆ ಸಲ್ಲಿಕೆ
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 50:50 ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು, ಡಿಸೆಂಬರ್ 9ರವರೆಗೆ ನಡೆದಿರುವ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿದ್ದಾರೆ.
ಹೈಕೋರ್ಟ್‌ನ ಹಿಂದಿನ ಆದೇಶದಂತೆ ಲೋಕಾಯುಕ್ತ ಪೊಲೀಸರು ಡಿಸೆಂಬರ್ 10ರವರೆಗಿನ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದರು. ವರದಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಧಿಕೃತವಾಗಿ ಸ್ವೀಕರಿಸಿತು.
ಈ ಸಂದರ್ಭದಲ್ಲಿ ವಾದ ಮಂಡಿಸಿದ ಸ್ನೇಹಮಯಿ ಕೃಷ್ಣ ಪರ ವಕೀಲರು, ಮುಡಾ ಹಗರಣದ ಆರೋಪಿ ಸಿಎಂ ಆಗಿದ್ದಾರೆ. ಅವರೇ ರಾಜ್ಯದ ಮುಖ್ಯಸ್ಥರಾಗಿದ್ದು, ರಾಜ್ಯ ಸರ್ಕಾರದ ಹಿಡಿತದಲ್ಲಿಲ್ಲದ ಸಿಬಿಐ ಅಥವಾ ಬೇರೆ ಸ್ವತಂತ್ರ ಸಂಸ್ಥೆಗೆ ತನಿಖೆ ವಹಿಸಲು ಕೋರಿದರು. ಅಲ್ಲದೆ, ಪ್ರಕರಣದ ಎಲ್ಲ ಮಾಹಿತಿ ನ್ಯಾಯಪೀಠಕ್ಕೆ ಗೊತ್ತಿದೆ. ಹೀಗಾಗಿ ತನಿಖೆ ವಿಶ್ವಾಸಾರ್ಹವಾಗಲು ಸ್ವತಂತ್ರ ತನಿಖೆ ಅಗತ್ಯವೆಂದು ಹೇಳಿದರು.
ಪ್ರಕರಣದ ತನಿಖೆ ಸಿಬಿಐಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬಾಕಿಯಿದೆ. ಈ ಹಿನ್ನೆಲೆಯಲ್ಲಿ. ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸದಂತೆ ಸೂಚನೆ ನೀಡಬೇಕು ಎಂದು ಕೋರಿದರು. ಅಲ್ಲದೆ, ಜಾರಿ ನಿರ್ದೇಶನಾಲಯ ( ಇ.ಡಿ)ವನ್ನು ಪ್ರತಿವಾದಿಯನ್ನಾಗಿಸಲು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದರು.
ಈ ವೇಳೆ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 19ಕ್ಕೆ ಮುಂದೂಡಿತು.