
ಮಂಗಳೂರು: ಗೃಹ ಸಾಲ ಮರು ಪಾವತಿಸಲಾಗದೆ 47 ವರ್ಷದ ಗ್ರಾಹಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ನಂತರ ಮಂಗಳೂರು ಕ್ಯಾಥೋಲಿಕ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (MCC) ಬ್ಯಾಂಕ್ ಮುಖ್ಯಸ್ಥ ಅನಿಲ್ ಲೊಬೊ ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಅನಿಲ್ ಲೊಬೊ ಅವರ ಕಿರುಕುಳದಿಂದ ಬೇಸತ್ತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೋ ರೆಕಾರ್ಡ್ ಮಾಡಿ ಪೆರ್ಮಂಕಿ ಗ್ರಾಮದ ಮನೋಹರ್ ಪಿರೇರಾ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು.ಆದರೆ ಬ್ಯಾಂಕ್ ಈ ಆರೋಪವನ್ನು ನಿರಾಕರಿಸಿದೆ.
ಈ ಸಂಬಂಧ ಮೃತನ ಸಹೋದರ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಹಿರಿಯ ಸಹೋದರ ಮೆಲ್ಬರ್ನ್ ಪಿರೇರಾ ಅವರೊಂದಿಗೆ ವಾಸಿಸುತ್ತಿದ್ದ ಮನೋಹರ್ 10 ವರ್ಷಗಳ ಹಿಂದೆ MCC ಬ್ಯಾಂಕ್ ಸಾಲದಿಂದ ಮನೆಯೊಂದನ್ನು ಖರೀದಿಸಿದ್ದರು. ಕೋವಿಡ್ ಸಾಂಕ್ರಾಮಿಕ ವೇಳೆಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ನಂತರ ಎರಡು ವರ್ಷಗಳ ಹಿಂದೆ ಬ್ಯಾಂಕ್ ಮನೆಯನ್ನು ವಶಪಡಿಸಿಕೊಂಡಿತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮನೋಹರ್ ಗೆ ಎರಡು ಬಾರಿ ಹೃದಯಾಘಾತವಾಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಂತರ ಫೆಬ್ರವರಿ 2023 ರಲ್ಲಿ, ಸಿಸ್ಟರ್ ಕ್ರಿಸ್ಟಿನ್ ಅವರು ದತ್ತಿ ಸಂಸ್ಥೆಯೊಂದರಿಂದ ರೂ. 15 ಲಕ್ಷವನ್ನು ಮನೋಹರ್ ಪಿರೇರಾ ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿದರು. ಈ ಹಣ ಬಳಸಿ ಮನೋಹರ್ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೊಬೊ ಅವರ ಸಮನ್ವಯದೊಂದಿಗೆ ಸಾಲ ಮರುಪಾವತಿಸಿ, ಮನೆಯನ್ನು ಮರಳಿ ಪಡೆಯಲು ಯತ್ನಿಸಿದ್ದರು. ಆದರೆ, ಅನಿಲ್ ಲೊಬೊ ಸೆಲ್ಫ್ ಚೆಕ್ ಬಳಸಿ ಮನೋಹರ್ ಬ್ಯಾಂಕ್ ಖಾತೆಯಿಂದ ರೂ. 9 ಲಕ್ಷ ಹಣ ಡ್ರಾ ಮಾಡಿದ್ದಾರೆ. ಪರಿಣಾಮ ಸಾಲ ಮರುಪಾವತಿಸಲಾಗದೆ ಅವರು ಮಾನಸಿಕ ಯಾತನೆಗೆ ಒಳಗಾಗಿದ್ದರು. ಆರು ತಿಂಗಳ ಹಿಂದೆ ಮನೆಯನ್ನು ಕುಟುಂಬಕ್ಕೆ ನೀಡಲಾಗಿತ್ತು. ಆದರೆ ಸಾಕಷ್ಟು ಆರ್ಥಿಕ ಹೊಡೆತ ಬಿದ್ದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಮನೋಹರ್ ಮಾಡಿದ್ದ ವಿಡಿಯೋ ಅನೇಕ ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡಿದ್ದು, ಅದರಲ್ಲಿ ನನ್ನ ಸಾವಿಗೆ MCC ಬ್ಯಾಂಕಿನ ಅನಿಲ್ ಲೊಬೊ ಕಾರಣ. ನನ್ನ ಅಕೌಂಟ್ ನಿಂದ ರೂ. 9 ಲಕ್ಷ ಹಣವನ್ನು ಅವರು ವಿತ್ ಡ್ರಾ ಮಾಡಿಕೊಂಡಿದ್ದು, ಮನೆಯನ್ನು ವಶಕ್ಕೆ ಪಡೆಯಲಾಗಿದೆಎಂದು ಮನೋಹರ್ ಆರೋಪಿಸಿದ್ದರು. ಲೊಬೊ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 108ಅಡಿಯಲ್ಲಿ ಶಿಕ್ಷಾರ್ಹ ಅಪರಾಧದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪ ಕುರಿತ ಪರಿಶೀಲನೆಗಾಗಿ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.
Advertisement