
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕಾರ್ಯಗಳ ಕೈಗೊಳ್ಳುವಂತೆ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ.
ಈ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಪತ್ರಕ್ಕೆ ನಗರದ ಎಲ್ಲಾ ಬಿಜೆಪಿ ಶಾಸಕರು ಸಹಿಹಾಕಿ, ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.
ಬೆಂಗಳೂರು ನಗರ ದಿನದಿಂದ ದಿನಕ್ಕೆ ಶಿಥಿಲವಾಗುತ್ತಿದ್ದು, ತಪ್ಪು ಕಾರಣಗಳಿಗಾಗಿ ಹೊರ ದೇಶಗಳ ಗಮನ ಸೆಳೆಯುತ್ತಿದೆ ಎಂದು ಹೇಳಿದ್ದಾರೆ.
ನಗರದ ಪ್ರಮುಖ ರಸ್ತೆಗಳು ಹಾಗೂ ವಾರ್ಡ್ ರಸ್ತೆಗಳು ದುಸ್ಥಿತಿಗೆ ತಲುಪಿವೆ. ವಾಹನ ಸವಾರರು ಹಾಗೂ ನಾಗರಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತಾಣವಾಗಿದ್ದು, ದೇಶ-ವಿದೇಶಗಳಿಂದ ಪ್ರವಾಸಿಗರು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಮೂಲಸೌಕರ್ಯಗಳ ಕೊರತೆಯಿಂದ ಹಲವು ಕಂಪನಿಗಳು ನೆರೆ ರಾಜ್ಯಗಳಿಗೆ ತೆರಳುತ್ತಿವೆ. ಹೀಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಪ್ರತಿ ಕ್ಷೇತ್ರಕ್ಕೆ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿ ಮೂಲ ಸೌಕರ್ಯಗಳ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಈ ಹಿಂದೆ ಡಿಸಿಎಂ ಘೋಷಿಸಿದ 10 ಕೋಟಿ ರೂ. ನಿಧಿ ಒಂದೇ ಒಂದು ವಾರ್ಡ್‌ಗೆ ಸಾಕಾಗುತ್ತಿಲ್ಲ, ಹೀಗಾಗಿ ನಗರ ಬಿಜೆಪಿ ಶಾಸಕರು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ. ಹೆಚ್ಚುವರಿ ಅನುದಾನ ಕೇಳಿದ್ದಾರೆಂದು ಹೇಳಿದ್ದಾರೆ.
ಅನುದಾನ ವಿಚಾರದಲ್ಲಿ ತಾರತಮ್ಯವಾಗುತ್ತಿದೆ. ಈ ಹಿಂದೆ ಡಿಸಿಎಂ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತಲಾ 10 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು, ಆದರೆ, ಜಯನಗರ ಕ್ಷೇತ್ರಕ್ಕೆ ನೀಡಲಿಲ್ಲ, ಮಾಧ್ಯಮ ವರದಿಗಳ ನಂತರ, ಕಳೆದ ವಾರ ಹಣ ಬಿಡುಗಡೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಅವರು ಮಾತನಾಡಿ, ಮಂಗಳವಾರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, ಈ ಬಗ್ಗೆ ಡಿಸಿಎಂ ಒಪ್ಪಿಗೆ ನೀಡಿದ್ದಾರೆಂದು ಹೇಳಿದ್ದಾರೆ.
ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ಬಿಬಿಎಂಪಿ ಚುನಾವಣಗೆ ಆಸಕ್ತಿ ತೋರುತ್ತಿಲ್ಲ. ಕನಿಷ್ಠ ಅನುದಾನ ನೀಡಿಯಾದರೂ ನಿವಾಸಿಗಳ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮತ್ತೊಬ್ಬ ಬಿಜೆಪಿ ಶಾಸಕರು ಹೇಳಿದ್ದಾರೆ.
Advertisement