ಪ್ರಗತಿಪರ ಮತ್ತು ವಾಸ್ತವಿಕ ಬಜೆಟ್: ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ ಬಿಜೆಪಿ

ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಯುವಜನರು, ರೈತರು, ಮಹಿಳೆಯರು ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ “ಪ್ರಗತಿಪರ ಮತ್ತು ವಾಸ್ತವಿಕ” ಬಜೆಟ್ ಆಗಿತ್ತು ಎಂದು ಬಿಜೆಪಿ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಯುವಜನರು, ರೈತರು, ಮಹಿಳೆಯರು ಮತ್ತು ವಿಶೇಷವಾಗಿ ಹಿಂದುಳಿದ ವರ್ಗಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ “ಪ್ರಗತಿಪರ ಮತ್ತು ವಾಸ್ತವಿಕ” ಬಜೆಟ್ ಆಗಿತ್ತು ಎಂದು ಬಿಜೆಪಿ ಹೇಳಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಿಎಂ ಯಡಿಯೂರಪ್ಪ ಅವರು, ಪ್ರಧಾನಿ ಮೋದಿಯವರ ನವಭಾರತದ ಪರಿಕಲ್ಪನೆಯ ಸಾಕಾರದ ನಿಟ್ಟಿನಲ್ಲಿ, ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸುವ, ರಾಷ್ಟ್ರದ 'ಪ್ರಗತಿನಿಷ್ಠ ಬಜೆಟ್' ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಚುನಾವಣಾಪೂರ್ವ ಜನಪ್ರಿಯ ಘೋಷಣೆಗಳ ಬಜೆಟ್ ಮಂಡಿಸದೆ, ಈ ಮಧ್ಯಂತರ ಬಜೆಟ್ ಮೂಲಕ ನಮ್ಮ ಯುವಜನತೆ, ರೈತರು, ಮಹಿಳೆಯರು ಹಾಗೂ ವಿಶೇಷವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಜನರ ಜೀವನಮಟ್ಟ ಸುಧಾರಿಸುವ, ಹೊಸ ಭರವಸೆ, ಅವಕಾಶಗಳನ್ನು ಸೃಷ್ಟಿಸುವ ವಾಸ್ತವಿಕ ಆಯವ್ಯಯವನ್ನು ಕೇಂದ್ರ ವಿತ್ತ ಸಚಿವೆ ಮಂಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸದೃಢ, ಸಶಕ್ತ, ವಿಕಸಿತ, ವಿಶ್ವಗುರು ಭಾರತ ನಿರ್ಮಾಣದ ನಿಟ್ಟಿನಲ್ಲಿ ಎನ್.ಡಿ.ಎ ಸರ್ಕಾರದ ಬದ್ಧತೆಯನ್ನು ಈ ಬಜೆಟ್ ಪುನರುಚ್ಚರಿಸಿದ್ದು, ದೇಶದ ಪ್ರಗತಿಗೆ ಪೂರಕವಾಗಿರುವ ಈ ಬಜೆಟ್ ಅನ್ನು ಸ್ವಾಗತಿಸುತ್ತೇನೆಂದು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ವರೆಗೂ ನಡೆದು ಬಂದ ಹಾದಿ ಬಡತನ ನಿರ್ಮೂಲನೆಗಾಗಿ ಸುಧಾರಣೆ ಹಾಗೂ ಅಭಿವೃದ್ದಿಯ ಆರ್ಥಿಕ ಹೆಜ್ಜೆ ಗುರುತುಗಳು. ಮುಂದಿನ ಹೆಗ್ಗುರಿ ಸದೃಢ ಭಾರತ ಕಟ್ಟುವ ಮಹಾಸಂಕಲ್ಪ, 2047ರ ವೇಳೆಗೆ ವಿಶ್ವ ಮುಂಚೂಣಿಯಲ್ಲಿ ಅಗ್ರ ಸ್ಥಾನದಲ್ಲಿ ನಿಲ್ಲುವ ಭಾರತ ನಿರ್ಮಾಣದ ಯೋಜನೆ ರೂಪಿಸಲು ಇಂದು ಸಂಸತ್ತಿನಲ್ಲಿ ಮಂಡನೆಯಾಗಿರುವ ಬಜೆಟ್ ಆತ್ಮ ವಿಶ್ವಾಸ ತುಂಬುವ ಭರವಸೆಯಾಗಿದೆ.

ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ, ಪ್ರವಾಸೋದ್ಯಮ, ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವ ನೀಡುವ ಮೂಲಕ 'ವಿಕಸಿತ ಭಾರತದ ಕನಸನ್ನು' ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯ ಬಜೆಟ್ ಮಂಡಿಸುವುದರೊಂದಿಗೆ ಸತತ 6 ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞತೆಯ ದಿಟ್ಟ ಮಹಿಳೆಯಾಗಿ ರಾಷ್ಟ್ರ ರಾಜಕಾರಣದಲ್ಲಿ ದಾಖಲೆ ಬರೆದಿರುವ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪೂರಕ ಬಜೆಟ್ ಕೊಟ್ಟಿದ್ದಾರೆ. ಇದು ಬಡವರ ಪರವಾಗಿದೆ, ಅಭಿವೃದ್ಧಿಗೆ ಪೂರಕವಾಗಿದೆ, ತಂತ್ರಜ್ಞಾನ ಬಳಕೆಗೆ ಅನುಕೂಲಕರವಾಗಿದೆ ಮತ್ತು ಭಾರತದ ಏಳಿಗೆಗೆ ಪೂರಕವಾಗಿರುವ ಬಜೆಟ್. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಇದು ಪೂರಕ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯದಂತೆ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.

7 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ ತೆರಿಗೆ ಇಲ್ಲದಿರುವುದು ಮಧ್ಯಮವರ್ಗಕ್ಕೆ ಪೂರಕವಾಗಿದೆ. ಸ್ವಸಹಾಯ ಮಹಿಳಾ ಗುಂಪುಗಳ 9 ಕೋಟಿ ಮಹಿಳೆಯರಿಗೆ ಅನುಕೂಲವಾಗಿದೆ. 1 ಕೋಟಿ ಮನೆಗಳಿಗೆ ಸೋಲಾರ್, ಗರ್ಭಕೋಶ ಕ್ಯಾನ್ಸರ್​ಗೆ ಉಚಿತ ಲಸಿಕೆ, ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಉಚಿತ ಆಯುಷ್ಮಾನ್ ಯೋಜನೆ, ಸಣ್ಣ ಆದಾಯ ಪಡೆಯುವವರಿಗೆ ಅನುಕೂಲಕರ ಯೋಜನೆ, ಮಧ್ಯಮವರ್ಗದವರಿಗೆ ಮನೆ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ, ರೈಲು ಸಂಚಾರದಟ್ಟಣೆ ತಗ್ಗಿಸಲು ನಾಲ್ಕು ಕಾರಿಡಾರ್, 517 ಹೊಸ ವಿಮಾನ ಮಾರ್ಗ, ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಣಕಾಸು ನೆರವು, ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ವಿಶೇಷ ಅವಕಾಶ ಇವು ಇಂದಿನ ಬಜೆಟ್​ನ ಹೈಲೈಟ್ಸ್. ಇದರಿಂದ ನಮ್ಮ ದೇಶದ ಆರ್ಥಿಕತೆ ವಿಶ್ವಮಟ್ಟದಲ್ಲಿ ಗಮನ ಸೆಳೆಯಲಿದೆ. ಬಡ, ಮಧ್ಯಮವರ್ಗದವರಿಗೆ ಮನೆ ನಿರ್ಮಿಸಲು ಹೆಚ್ಚಿನ ಒತ್ತು ನೀಡಿದ ಆಶಾದಾಯ ಬಜೆಟ್ ಆಗಿದೆ ಎಂದರು.

ಒಟ್ಟಾರೆ ನಿರ್ಮಲಾ ಸಿತಾರಾಮನ್ ಅವರು ಮಂಡಿಸಿದ​​ ಬಜೆಟ್ ಸ್ವಾಗತಾರ್ಗ. ಯಾವುದೇ ಗಿಮಿಕ್ ರಾಜಕಾರಣ ಮಾಡದೇ ಮುಂದಿನ ಜನಾಂಗಕ್ಕೆ ಉಪಯೋಗ ಆಗುವಂತಿದೆ. 2047ಕ್ಕೆ ಭಾರತ ಮೊದಲ ಸ್ಥಾನದಲ್ಲಿರಬೇಕು. ಈಗಾಗಲೇ ಬ್ರಿಟಿಷರ ದಾಟಿ ನಾವು ಐದನೇ ಸ್ಥಾನಕ್ಕೆ ಬಂದಿದ್ದೇವೆ. ಮುಂದಿನ ಐದು ವರ್ಷದಲ್ಲಿ ಮೂರನೇ ಸ್ಥಾನದ ಗುರಿ ಇದೆ. ಅದಕ್ಕೆ ಪೂರಕ ಬಜೆಟ್ ಇದಾಗಿದ್ದು, ಇದನ್ನು ಸ್ವಾಗತಿಸಲಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ನೀಡಿರುವ ಮಧ್ಯಂತರ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com