ಕೇಂದ್ರ ಸರ್ಕಾರದಿಂದ 'ಭಾರತ್‌ ಬ್ರ್ಯಾಂಡ್‌' ಅಕ್ಕಿ ಬಿಡುಗಡೆ: ಕೆಜಿಗೆ 29 ರೂ., ಆನ್'ಲೈನ್, ರೀಟೇಲ್‌ ಮಳಿಗೆಗಳಲ್ಲಿ ಮಾರಾಟ!

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಬಿಜೆಪಿ ಚುನಾವಣೆಗೆ ಸಿದ್ಧತೆ, ತಂತ್ರಗಳನ್ನು ರೂಪಿಸಲು ಆರಂಭಿಸಿದೆ. ಇದರಂತೆ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್'ಗೆ ಟಕ್ಕರ್ ನೀಡಿರುವ ಕೇಂದ್ರ ಸರ್ಕಾರ ಪ್ರತಿ ಒಂದು ಕೆ.ಜಿ ಅಕ್ಕಿಗೆ ರೂ.29 ದರ ನಿಗದಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ನಡುವಲ್ಲೇ ಬಿಜೆಪಿ ಚುನಾವಣೆಗೆ ಸಿದ್ಧತೆ, ತಂತ್ರಗಳನ್ನು ರೂಪಿಸಲು ಆರಂಭಿಸಿದೆ. ಇದರಂತೆ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಸೆಳೆಯುತ್ತಿರುವ ಕಾಂಗ್ರೆಸ್'ಗೆ ಟಕ್ಕರ್ ನೀಡಿರುವ ಕೇಂದ್ರ ಸರ್ಕಾರ ಪ್ರತಿ ಒಂದು ಕೆ.ಜಿ ಅಕ್ಕಿಗೆ ರೂ.29 ದರ ನಿಗದಿಪಡಿಸಿ, ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ‘ಭಾರತ್‌ ಬ್ರ್ಯಾಂಡ್‌’ ಅಕ್ಕಿ ಮಾರಾಟ ಮಾಡಲು ಮುಂದಾಗಿದೆ.

ಈಗಾಗಲೇ, ‘ಭಾರತ್‌ ಬ್ರ್ಯಾಂಡ್‌’ ಗೋಧಿ ಹಿಟ್ಟು ಮತ್ತು ಕಡಲೆ ಬೇಳೆ ಮಾರಾಟವಾಗುತ್ತಿದೆ. ಇದೀಗ ಇದರೊಂದಿಗೆ ಅಕ್ಕಿಯನ್ನೂ ಸೇರಿಸಲಾಗಿದೆ. ಪ್ರತಿ ಒಂದು ಕೆ.ಜಿ ಅಕ್ಕಿಗೆ ರೂ.29 ದರ ನಿಗದಿಪಡಿಸಲಾಗಿದ್ದು, 5 ಕೆ.ಜಿ ಮತ್ತು 10 ಕೆ.ಜಿ ಪ್ಯಾಕೆಟ್‌ಗಳಲ್ಲಿ ದೊರೆಯಲಿದೆ ಎಂದು ತಿಳಿದುಬಂದಿದೆ.

ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್‌) ಮತ್ತು ಕೇಂದ್ರೀಯ ಭಂಡಾರದ ಮಳಿಗೆಗಳಲ್ಲಿ ಮಾರಾಟಕ್ಕೆ ನಿರ್ಧರಿಸಲಾಗಿದ್ದು,  ಇ–ಕಾರ್ಮಸ್‌ ವೇದಿಕೆಗಳಲ್ಲೂ ಅಕ್ಕಿ ದೊರೆಯಲಿದೆ ಎಂದು ವರದಿಗಳು ತಿಳಿಸಿವೆ.

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಮತದಾರರನ್ನು ಆಕರ್ಷಿಸಿತ್ತು. ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದಾಗಿದೆ. ಹಸಿವು ಮುಕ್ತ ಕರ್ನಾಟಕ ಎಂಬ ಘೋಷ ವಾಕ್ಯದೊಂದಿಗೆ ರಾಜ್ಯ ಸರ್ಕಾರ ಯೋಜನೆಯನ್ನು ಘೋಷಣೆ ಮಾಡಿತ್ತು. ಯೋಜನೆಯ ಪ್ರಕಾರ  ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಅಥವಾ ಆಹಾರ ಧಾನ್ಯ ಉಚಿತವಾಗಿ ನೀಡಲಾಗುವುುದು ಹೇಳಿತ್ತು. ಆದರೆ, ಯೋಜನೆಗೆ ಅಕ್ಕಿ ಸಿಗದ ಹಿನ್ನೆಲೆಯಲ್ಲಿ 5 ಕೆಜಿ ಅಕ್ಕಿ ಬದಲಾಗಿ ಪ್ರತಿ ಫಲಾನುಭವಿಗಳಿಗೆ 170 ರೂಪಾಯಿ ಹಣ ನೀಡುವುದಾಗಿ ತಿಳಿಸಿತ್ತು.

ಇದೀಗ ಕೇಂದ್ರ ಸರ್ಕಾರ ನೇರವಾಗಿ ಜನರಿಗೇ ಅಕ್ಕಿ ಮಾರಾಟ ಮಾಡಲು ಮುಂದಾಗಿರುವುದು ಕಾಂಗ್ರೆಸ್'ಗೆ ಗಾಯದ ಮೇಲೆ ಉಪ್ಪು ಹಾಕಿದಂತಾಗಿದೆ.

ರಾಜ್ಯ ಸರ್ಕಾರವು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಮಹಾಮಂಡಳ ಅಥವಾ ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದಿಂದ ನೇರವಾಗಿ ಅಕ್ಕಿ ಖರೀದಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೆ.ಹೆಚ್.ಮುನಿಯಪ್ಪ ಅವರು, ಈ ಮಂಡಳ, ಒಕ್ಕೂಟಗಳು ನೇರವಾಗಿ ಸರ್ಕಾರಕ್ಕೆ ಅಕ್ಕಿ ಮಾರಾಟ ಮಾಡುವುದಿಲ್ಲ. ಎಫ್‌ಸಿಐನಿಂದ ಅಕ್ಕಿಯನ್ನು ಪಡೆದು ಈ ಎರಡು ಏಜೆನ್ಸಿಗಳ ಮೂಲಕ ಮಾರಾಟ ಮಾಡುತ್ತಿದೆ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಗೆ ನಮಗೆ 2 ಲಕ್ಷ ಟನ್‌ಗಳಿಂದ 2.5 ಲಕ್ಷ ಟನ್‌ ಅಕ್ಕಿಯ ಅಗತ್ಯವಿದೆ. ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. ರೂ.38 ವರೆಗೆ ಅಕ್ಕಿಯನ್ನು ಖರೀದಿ ಮಾಡಿರುವ ಕೇಂದ್ರ ಸರ್ಕಾರ ಅದನ್ನು ಶಾಶ್ವತವಾಗಿ ಗೋದಾಮುಗಳಲ್ಲಿ ಇರಿಸಿಕೊಳ್ಳಲು ಸಾಧ್ಯವಾಗದೆ, ಇದೀಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದಾರೆಂದು ತಿಳಿಸಿದ್ದಾರೆ.

ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಮಾತನಾಡಿ, ಹಣದುಬ್ಬರ ನಿಯಂತ್ರಣ ತಂತ್ರ ಇದಾಗಿದೆ ಎಂದು ಹೇಳಿದ್ದಾರೆ.

ಆಹಾರ ತಜ್ಞ ಮತ್ತು ಎಫ್‌ಸಿಐ ಮಾಜಿ ಅಧ್ಯಕ್ಷ ಡಿವಿ ಪ್ರಸಾದ್ ಅವರು ಮಾತನಾಡಿ, ಇದು ಹಣದುಬ್ಬರ ಪರಿಸ್ಥಿತಿ ಎದುರಿಸುವ ತಂತ್ರವಾಗಿದೆ.     ಇಂತಹ ಪರಿಸ್ಥಿತಿ ಎದುರಿಸಲು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವಂತೆ ಹಲವು ವರ್ಷಗಳ ಹಿಂದೆಯೇ ನಾನು ಸಲಹೆ ನೀಡದ್ದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com