ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ: ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಗೆ ಗುದ್ದಿ ಕೆಳಗೆ ಬೀಳಿಸಿದ ಕಳ್ಳರು, ಸರ ಕದ್ದು ಪರಾರಿ!

ನಾಲ್ಕು ವರ್ಷದ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಗುದ್ದಿ ಕೆಳಗೆ ಬೀಳಿಸಿದ ಖದೀಮರು, ಆಕೆಯ ಸರ ಕದ್ದು ಪರಾರಿಯಾಗಿರುವ ಘಟನೆಯೊಂದು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ತಾಡಿಸಘಟ್ಟ ರಸ್ತೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಾಲ್ಕು ವರ್ಷದ ಮಗುವಿನೊಂದಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಗುದ್ದಿ ಕೆಳಗೆ ಬೀಳಿಸಿದ ಖದೀಮರು, ಆಕೆಯ ಸರ ಕದ್ದು ಪರಾರಿಯಾಗಿರುವ ಘಟನೆಯೊಂದು ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲುವಿನ ತಾಡಿಸಘಟ್ಟ ರಸ್ತೆಯಲ್ಲಿ ನಡೆದಿದೆ.

ನೆಲಮಂಗಲದ ಸೋಂಪುರ ನಿವಾಸಿ ಮೋನಿಶಾ (26) ಅವರು ಮಾರಸಂದ್ರದಲ್ಲಿರುವ ತನ್ನ ತಾಯಿಗೆ ಮನೆಗೆ ತೆರಳಿದ್ದರು. ಸಂಜೆ 5 ಸುಮಾರಿಗೆ ತಮ್ಮ ಮಗ ಸೇವಂತಗೌಡ (4) ನೊಂದಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ವೇಗವಾಗಿ ಎದುರಿನಿಂದ ಬಂದ ಆರೋಪಿಗಳು ಮೋನಿಶಾ ಅವರ ತಲೆಗೆ ಗುದ್ದಿದ್ದಾರೆ. ಇದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಮೋನಿಶಾ ಅವರು ಕೆಳಗೆ ಬಿದ್ದಿದ್ದಾರೆ. ಮಗು ಕೂಡ ಕೆಳಗೆ ಬಿದ್ದಿದೆ.

ಕೂಡಲೇ ಆರೋಪಿಗಳು ಮೋನಿಶಾ ಅವರ ಬಳಿಗೆ ಬಂದಿದ್ದು, ಸರವನ್ನು ಕದ್ದು ಪರಾರಿಯಾಗಿದ್ದಾರೆ. ರಸ್ತೆಯಲ್ಲಿ ಯಾರೂ ಇರದ ಕಾರಣ ಕೂಗಿದರೂ ಯಾರೂ ಕೂಡ ರಕ್ಷಣೆಗೆ ಬರಲಿಲ್ಲ ಎಂದು ಮೋನಿಶಾ ಅವರು ಹೇಳಿದ್ದಾರೆ.

ಘಟನೆ ವೇಳೆ ಆರೋಪಿಗಳು ಗುದ್ದಿದ್ದ ಏಟು ನನ್ನ ಹೆಲ್ಮೆಟ್'ಗೆ ಬಿದ್ದಿತ್ತು. ವಾಹನದಿಂದ ಬಿದ್ದ ಪರಿಣಾಮ ನನಗೆ ಹಾಗೂ ಮಗನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ವೇಳೆ ಆಘಾತಕ್ಕೊಳಗಾದ ಹಿನ್ನೆಲೆಯಲ್ಲಿ ಆರೋಪಿಗಳ ವಾಹನ ಸಂಖ್ಯೆಯನ್ನೂ ನಾನು ನೋಟಲಿಲ್ಲ. ಮಗನೊಂದಿಗೆ ಮನೆಗೆ ಬಂದ ಬಳಿಕ ಪೊಲೀಸರಿಗೆ ದೂರು ನೀಡಿದೆ ಎಂದು ತಿಳಿಸಿದ್ದಾರೆ.

ಮಹಿಳೆ ದೂರು ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಪೊಲೀಸರು ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಸ್ತೆಯಲ್ಲಿ ಯಾವುದೇ ಸಿಸಿಟಿವಿಗಳಿಲ್ಲ. ಇದು ಖದೀಮರಿಗೆ ತಿಳಿದಿರಬೇಕು. ಇದೀಗ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ. ಇದರಿಂದ ಖದೀಮರ ಸುಳಿವುಗಳು ಸಿಕುವ ವಿಶ್ವಾಸವಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com