ಪ್ರೇಮಿಗಳ ದಿನ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ; ಉದ್ಯಮಿಗಳ ಅಸಮಾಧಾನ

ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಆಹಾರ ಮತ್ತು ಪಾನೀಯ (ಎಫ್ & ಬಿ) ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯಂದು ಬೆಂಗಳೂರಿನ ಕೆಲವು ಭಾಗಗಳಲ್ಲಿ ಮದ್ಯಪಾನಕ್ಕೆ ನಿಷೇಧ ಹೇರಲಾಗಿದ್ದು, ಈ ಬೆಳವಣಿಗೆಗೆ ಆಹಾರ ಮತ್ತು ಪಾನೀಯ (ಎಫ್ & ಬಿ) ಉದ್ಯಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರವರಿ 16 ರಂದು ವಿಧಾನ ಪರಿಷತ್ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಫೆಬ್ರವರಿ 14ರ ಸಂಜೆ 5ರಿಂದ ಫೆಬ್ರವರಿ 16ರ ಮಧ್ಯರಾತ್ರಿವರೆಗೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತರು ಫೆ.6ರಂದು ಆದೇಶ ಹೊರಡಿಸಿದ್ದಾರೆ.

ನ್ಯಾಷನಲ್ ರೆಸ್ಟೊರೆಂಟ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (NRAI) ಹಾಗೂ ಪಾಪ್ಯೂಲರ್ ನೈಬರ್ ಹುಡ್ ಪಬ್-1522 ಸಂಸ್ಥಾಪಕ ಚೇತರ್ ಹೆಗಡೆ ಎಂಬುವವರು ಮಾತನಾಡಿ, ಈ ನಿರ್ಧಾರ ಉದ್ಯಮದಲ್ಲಿ ಶೇ.10-15ರಷ್ಟು ನಷ್ಟವನ್ನು ತಂದೊಡ್ಡಲಿದೆ. ಪ್ರೇಮಿಗಳ ದಿನದಂದು ಹೆಚ್ಚೆಚ್ಚು ಜನರು ರೆಸ್ಟೋರೆಂಟ್ ಗಳಿಗೆ ಬರುತ್ತಾರೆ. ಇದಕ್ಕಾಗಿಯೇ ನಾವು ತಿಂಗಳಾನುಗಟ್ಟಲೆಯಿಂದ ಸಿದ್ಧತೆಗಳ ಆರಂಭಿಸಿದ್ದೆವು. ಆದರೆ, ಸರ್ಕಾರ ಈ ನಿರ್ಧಾರ ನಮಗೆ ನಷ್ಟವನ್ನು ತಂದೊಡ್ಡಲಿದೆ. ಗ್ರಾಹಕರ ಉತ್ಸಾಹವನ್ನು ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.

ಜನರು ವ್ಯಾಲೆಂಟೈನ್ಸ್ ಡೇಗಾಗಿ ಎದುರುನೋಡುತ್ತಿರುತ್ತಾರೆ. ಟೇಬಲ್‌ಗಳನ್ನು ಬುಕ್ ಮಾಡುತ್ತಾರೆ. ಈಗಾಗಲೇ ನಾವು ಪ್ರೇಮಿಗಳ ದಿನಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ನಡೆಸಿದ್ದೆವು. ದುಬಾರಿ ಬೆಲೆಗಳ ಮದ್ಯಗಳನ್ನು ಸಂಗ್ರಹಿಸಿಟ್ಟಿದ್ದೆವು. ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಮೇಲಿನ ತೆರಿಗೆಗಳು ತುಂಬಾ ಹೆಚ್ಚಿವೆ. ಈ ತೆರಿಗೆ ಈಗಾಗಲೇ ನಮಗೆ ಸಾಕಷ್ಟು ಹೊರೆಯಾಗಿದೆ. ಇದೀಗ ಮದ್ಯ ನಿಷೇಧ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಎನ್‌ಆರ್‌ಎಐ ಜಂಟಿ ಕಾರ್ಯದರ್ಶಿ ಹಾಗೂ ಜನಪ್ರಿಯ ಬಾರ್ ವಾಟ್ಸನ್‌ ಮಾಲೀಕ ಅಮಿತ್ ರಾಯ್ ಅವರು ಮಾತನಾಡಿ, ಈ ನಿರ್ಧಾರ ಅಸಮಂಜಸವಾದದ್ದು. ಇದರಿಂದ ಯಾರಿಗೂ ಸಹಾಯವಾಗುವುದಿಲ್ಲ. ಪ್ರೇಮಿಗಳ ದಿನಾಚರಣೆಗಾಗಿ ಡಿಜೆ. ವಿಶೇಷ ಮೆನು ಸೇರಿದಂತೆ ಹಲವು ಸಿದ್ಧತೆಗಳನ್ನು ನಡೆಸಿದ್ದೆವು. ಇದೀಗ ಎಲ್ಲವೂ ನಷ್ಟವಾದಂತಾಗಿದೆ ಎಂದು ಹೇಳಿದ್ದಾರೆ.

“ಪ್ರೇಮಿಗಳ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸುತ್ತಿರುವುದು ಇದೇ ಮೊದಲಾಗಿದೆ. ಬೆಂಗಳೂರು ಅತೀ ಹೆಚ್ಚು ಯುವಕರನ್ನು ಹೊಂದಿರುವ ನಗರವಾಗಿದ್ದು, ಜನರು ಈ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಇಷ್ಟಪಡುತ್ತಾರೆ ಎಂದು ಲೀಸರ್ ಎಂಟರ್‌ಟೈನ್‌ಮೆಂಟ್‌ನ ನರೇನ್ ಬೆಲಿಯಪ್ಪ ಎಂಬುವವರು ಹೇಳಿದ್ದಾರೆ.

ಆಹಾರ ಮತ್ತು ಉದ್ಯಮ ಕ್ಷೇತ್ರದಿಂದ ಬರುತ್ತಿರುವ ಆದಾಯ ಎಷ್ಟಿದೆ ಎಂಬುದು ಸರ್ಕಾರಕ್ಕೆ ಚೆನ್ನಾಗಿ ತಿಳಿದಿದೆ. ಇದೀಗ ಉದ್ಯಮಕ್ಕಾಗುವ ನಷ್ಟದ ಬಗ್ಗೆ ತಿಳಿದು ಎಚ್ಚರಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com