ಬೆಳ್ಳಂದೂರು ಕೆರೆಯಲ್ಲಿ ಎಸ್‌ಟಿಪಿ ಕಾಮಗಾರಿ ವೇಗಗೊಳಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಳ್ಳಂದೂರು ಕೆರೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಕಾರ್ಯ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಸೂಚನೆ ನೀಡಿದರು.
ಬೆಳ್ಳಂದೂರು ಕೆರೆಯಲ್ಲಿ ಎಸ್‌ಟಿಪಿ ಕಾಮಗಾರಿ ವೇಗಗೊಳಿಸಿ: ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಾಣ ಕಾರ್ಯ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸಚಿವ ಈಶ್ವರ್ ಖಂಡ್ರೆ ಅವರು ಗುರುವಾರ ಸೂಚನೆ ನೀಡಿದರು.

ಜೌಗು ಭೂಮಿ ಪ್ರಾಧಿಕಾರದ ಅನೌಪಚಾರಿಕ ಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಬೆಳ್ಳಂದೂರು ಕೆರೆಗೆ ಸಂಸ್ಕರಣೆಯಾಗದೆ ನೇರವಾಗಿ ತ್ಯಾಜ್ಯ ಜಲ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಂಡ ವಿಧಿಸಿದ್ದು, ಈ ವರ್ಷಾಂತ್ಯದೊಳಗೆ ಎಸ್‌ಟಿಪಿ ನಿರ್ಮಿಸಬೇಕಿದ್ದರೂ ವಿಳಂಬ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಬಳಿಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು ಕಾಮಗಾರಿ ತ್ವರಿತಗೊಳಿಸುವಂತೆ ತಿಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಂಗಳೂರು ನಗರದಲ್ಲಿ ಮುಂದಿನ ದಿನಗಳಲ್ಲಿ ನೀರಿನ ತೀವ್ರ ಸಮಸ್ಯೆ ಎದುರಾಗಲಿದ್ದು, ಜಲಮೂಲಗಳನ್ನು ಮತ್ತು ಕೆರೆ, ಕಟ್ಟೆಗಳನ್ನು ಸಂರಕ್ಷಣೆ ಮಾಡಬೇಕಾದ ಅನಿವಾರ್ಯ ಇದೆ. ನೇರವಾಗಿ ಸಂಸ್ಕರಣೆ ಮಾಡದೆ ತ್ಯಾಜ್ಯ ಹರಿಸುತ್ತಿರುವುದರಿಂದ ಕೆರೆಗಳ ನೀರು ಕಲುಷಿತವಾಗಿ ನೊರೆ ಹೊರಹೊಮ್ಮುವ ಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲವೂ ಕಲುಷಿತವಾಗುತ್ತಿದೆ. ಈ ಪ್ರಕರಣವನ್ನು ಎನ್‌ಜಿಟಿ ಗಂಭೀರವಾಗಿ ಪರಿಗಣಿಸಿ, ದಂಡ ವಿಧಿಸಿದ್ದರೂ ಸಂಸ್ಕರಣಾ ಘಟಕ ನಿರ್ಮಾಣದಲ್ಲಿ ವಿಳಂಬ ಆಗುತ್ತಿರುವುದು ಸರಿಯಲ್ಲ.

ಎಲ್ಲ ಜಲಮೂಲಗಳ ಎಸ್‌ಟಿಪಿ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಪಟ್ಟಂದ ಸಂಸ್ಥೆಗಳಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ 2.25 ಹೆಕ್ಟೇರ್‌ನಲ್ಲಿ 16,700 ಕ್ಕೂ ಹೆಚ್ಚು ಜೌಗು ಪ್ರದೇಶಗಳು ಮತ್ತು ಕೆರೆಗಳಿವೆ. ಈ ಜಲಮೂಲಗಳತ್ತ ಗಮನಹರಿಸಬೇಕಿದೆ. ಅವುಗಳನ್ನು ರಕ್ಷಿಸಬೇಕಿದೆ. ಅವುಗಳನ್ನು ಸಂರಕ್ಷಿತ ಜೌಗು ಪ್ರದೇಶಗಳೆಂದು ಘೋಷಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಗುರುತಿಸದ ಜೌಗು ಪ್ರದೇಶಗಳ ಪಟ್ಟಿಯನ್ನು ಸಿದ್ಧಪಡಿಸಿ ಸಾರ್ವಜನಿಕರ ಮಾಹಿತಿಗಾಗಿ ಸರ್ಕಾರಿ ವೆಬ್‌ಸೈಟ್‌ನಲ್ಲಿ ಅಧಿಕಾರಿಗಳು ಪ್ರಕಟಿಸಬೇಕು.

ಜಲಮೂಲಗಳನ್ನು ಕಲುಷಿತಗೊಳಿಸುವುದರಿಂದ ಉಂಟಾಗುವ ಪರಿಣಾಮಗಳ ಜೊತೆಗೆ ನಿಯಮಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಮಾಹಿತಿಯನ್ನು ನೀಡಬೇಕು. ಜೌಗು ಪ್ರದೇಶಗಳ ಸಂರಕ್ಷಣೆಗೆ ಕ್ರಿಯಾ ಯೋಜನೆ ರೂಪಿಸಿ 10 ದಿನಗಳಲ್ಲಿ ಸಲ್ಲಿಸಿ ಎಂದು ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com