ಈ ದಿನದ ಸುದ್ದಿ ಮುಖ್ಯಾಂಶಗಳು: 10-02-2024

ಚಿಕ್ಕಬಳ್ಳಾಪುರ ಶಾಲಾ ಕ್ರೀಡಾಕೂಟದ ವೇಳೆ ವಿದ್ಯುತ್ ಅವಘಡ ಓರ್ವ ಸಾವು. ಆಸ್ಪತ್ರೆಯಲ್ಲಿ ರೀಲ್ಸ್ 38 ವಿದ್ಯಾರ್ಥಿಗಳ ಅಮಾನತು. ಶಸ್ತ್ರಚಿಕಿತ್ಸಾ ಘಟಕದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವೈದ್ಯ ಅಮಾನತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಮೇಲೆ ಇಡಿ ದಾಳಿ
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಅವರ ಸಂಬಂಧಿಕರಿಗೆ ಸಂಬಂಧಪಟ್ಟ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. 34 ವರ್ಷದ ಶಾಸಕ ಭರತ್ ರೆಡ್ಡಿಯವರ ಬಳ್ಳಾರಿ ಮನೆ ಮತ್ತು ಕರ್ನಾಟಕ ಹಾಗೂ ತೆಲಂಗಾಣದ ಕೆಲವು ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಈ ಹಿಂದೆ ಹುಟ್ಟುಹಬ್ಬಕ್ಕೆ ಇಡೀ ಬಳ್ಳಾರಿ ನಗರದ ಮನೆ ಮನೆಗೆ ಶಾಸಕ ಭರತ ರೆಡ್ಡಿ ಕುಕ್ಕರ್ ನೀಡಿದ್ದರು. ಇಡಿ ಅಧಿಕಾರಿಗಳ ನಾಲ್ಕು ತಂಡಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ. ಭರತ್ ರೆಡ್ಡಿ ಮತ್ತು ಅವರ ಸಂಬಂಧಿಕರ ಮೇಲೆ ಯಾವ ಪ್ರಕರಣದಲ್ಲಿ ದಾಳಿ ನಡೆಸಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾರಾ ಭರತ್ ರೆಡ್ಡಿ ಕಾಂಗ್ರೆಸ್ ನಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಭರತ್‌ ರೆಡ್ಡಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಆಸ್ಪತ್ರೆಯಲ್ಲಿ ರೀವ್ಸ್ 38 ವಿದ್ಯಾರ್ಥಿಗಳ ಅಮಾನತು
ಬೆಂಗಳೂರಿನ ಕಿಮ್ಸ್‌ ಆಸ್ಪತ್ರೆಯಲ್ಲಿ ಮಹಿಳಾಯೊಬ್ಬರಿಗೆ ಕಿರಿಯ ವೈದ್ಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಕಿರಿಯ ವೈದ್ಯ ಡಾ. ರಾಜು ಕಿಮ್ಸ್ ಆಸ್ಪತ್ರೆಯ ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ವೈದ್ಯೆ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂದು ಆರೋಪಿಸಲಾಗಿದ್ದು ಮಹಿಳಾ ವೈದ್ಯೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಚಿತ್ರದುರ್ಗದ ಭರಮಸಾಗರ ಸಮುದಾಯ ಆರೋಗ್ಯ ಕೇಂದ್ರದ ಶಸ್ತ್ರಚಿಕಿತ್ಸಾ ಘಟಕ ಬಳಸಿಕೊಂಡು ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ ಮಾಡಿಸಿದ್ದ ಹೊರಗುತ್ತಿಗೆ ವೈದ್ಯ ಡಾ. ಅಬಿಷೇಕ್ ಎಂಬಾತನನ್ನು ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶಿಸಿದ್ದಾರೆ. ಮತ್ತೊಂದೆಡೆ ಗದಗ ಜಿಲ್ಲಾಸ್ಪತ್ರೆಯಲ್ಲಿ ರೀಲ್ಸ್ ಮಾಡಿ ಹುಚ್ಚಾಟ ಮೆರೆದಿದ್ದ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 38 ಮಂದಿ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಜಿಲ್ಲಾಸ್ಪತ್ರೆಯನ್ನೇ ರೀಲ್ಸ್ ಸ್ಪಾಟ್ ಮಾಡಿಕೊಂಡಿದ್ದಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ 38 ಮಂದಿ ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ ನೀಡಲಾಗಿದೆ.

ಶಾಲಾ ಕ್ರೀಡಾಕೂಟದ ವೇಳೆ ವಿದ್ಯುತ್ ಅವಘಡ: ಓರ್ವ ಸಾವು
ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಶ್ರೀರಾಮಕೃಷ್ಣ ಶಾರದಾದೇವಿ ಶಾಲಾ ಕ್ರೀಡಾಕೂಟದ ವೇಳೆ ವಿದ್ಯುತ್ ಅವಘಡ ಸಂಭವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲ್ಲಂಕರಾಯನಕುಂಟೆ ಗ್ರಾಮದಲ್ಲಿನ ಶಾಲಾ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಗಾಳಿಗೆ ಹಾರಿ ವಿದ್ಯುತ್ ತಂತಿಗಳಿಗೆ ಸ್ಪರ್ಶವಾಗಿದೆ. ಹೀಗಾಗಿ ಪೆಂಡಲ್ ಕೆಳಗೆ ಇದ್ದ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ವಿದ್ಯುತ್ ಪಸರಿಸಿದ್ದು, ಘಟನೆಯಲ್ಲಿ ನಾಗೇನಹಳ್ಳಿ ನಿವಾಸಿ ರಾಘವೇಂದ್ರ ಎಂಬುವರು ಮೃತಪಟ್ಟಿದ್ದಾರೆ. ಇನ್ನು 18ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಗ ದಾಖಲು ಮಾಡಲಾಗಿದೆ. ಈ ಪೈಕಿ ನಾಲ್ವರು ವಿದ್ಯಾರ್ಥಿಗಳು, ಇಬ್ಬರು ಪೋಷಕರು ಹಾಗೂ ಇಬ್ಬರು ಶಿಕ್ಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ: ಕೆಎಸ್ ಈಶ್ವರಪ್ಪ ವಿರುದ್ಧ ಎಫ್ಐಆರ್
ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್ ಐಆರ್ ದಾಖಲಾಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಹನುಮಂತ ಎಂಬುವರು ನೀಡಿದ ದೂರು ಆಧರಿ ಪೊಲೀಸರು ಕೆಎಸ್ ಈಶ್ವರಪ್ಪ ವಿರುದ್ಧ ಐಪಿಸಿ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಈಶ್ವರಪ್ಪ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಜನರ ಮಧ್ಯೆ ಗಲಭೆಗಳಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹನುಮಂತ ದೂರಿದ್ದರು. ತಮ್ಮ ವಿರುದ್ಧ ಎಫ್ಐಆರ್ ದಾಖಲಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ ಅವರು, ದೇಶದ್ರೋಹಿ ಹೇಳಿಕೆ ನೀಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ನನ್ನ ವಿರುದ್ಧ ನೂರು ಎಫ್​ಐಆರ್​ ಹಾಕಲಿ, ನಾನು ಹೆದರಲ್ಲ. ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೆ ಎಂದು ಹೇಳಿದರು. ಕೆಎಸ್ ಈಶ್ವರಪ್ಪ ಹೇಳಿಕೆಗೆ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕನ್ನಡಪರ, ಕರ್ನಾಟಕ ಪರ ಧ್ವನಿಯೆತ್ತಿದ್ದಕ್ಕೆ ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂದು ಹೇಳುತ್ತಿದ್ದಾರೆ. ಬೇರೆಯವರು ಏಕೆ ಗುಂಡಿಕ್ಕಿ ಕೊಲ್ಲಬೇಕು, ನೀವು ಸಮಯ ಕೊಟ್ಟರೆ ನಿಮ್ಮ ಎದುರು ಬಂದು ನಿಲ್ಲುವೆ, ನೀವೇ ಗುಂಡಿಕ್ಕಿ ಕೊಂದು ಬಿಡಿ ಎಂದು ಟಾಂಗ್ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com