ಕಳಸಾ-ಬಂಡೂರಿ ಯೋಜನೆಗೆ ಮತ್ತೊಂದು ವಿಘ್ನ: ಅರಣ್ಯ ಭೂಮಿ ಪರಿವರ್ತನೆಗೆ ಹುಲಿ ಸಂರಕ್ಷಣಾ ಪ್ರಾಧಿಕಾರ ನಕಾರ!
ಬೆಳಗಾವಿ: ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ನಡೆಯುತ್ತಿರುವ ಪ್ರಯತ್ನದಲ್ಲಿ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದೆ. ಯೋಜನೆ ಜಾರಿಗೆ 26.96 ಹೆಕ್ಟೇರ್ ಅರಣ್ಯ ಭೂಮಿಯನ್ನು ಪರಿವರ್ತಿಸುವ ಕರ್ನಾಟಕದ ಬೇಡಿಕೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತಿರಸ್ಕರಿಸಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಪ್ರಾಧಿಕಾರದ ಖಾಯಂ ಸಮಿತಿಯ 77ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಯೋಜನೆ ಅನುಷ್ಠಾನ ಮತ್ತು ಅದರ ಪರಿಣಾಮಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 38 ರ ಪ್ರಕಾರ, ಪ್ರಾಧಿಕಾರವು ಸಲ್ಲಿಸಿದ ಪ್ರಸ್ತಾವನೆಗಳ ಮೇಲೆ ರ್ಧಾರಗಳನ್ನು ತೆಗೆದುಕೊಳ್ಳಲು ಶಾಶ್ವತ ಸಮಿತಿಗೆ ಅಧಿಕಾರವಿದೆ. ಹೀಗಾಗಿ ಕರ್ನಾಟಕ ಸರ್ಕಾರ ಎನ್‌ಟಿಸಿಎಗೆ ಮನವಿ ಸಲ್ಲಿಸಿತ್ತು.
ಈ ಪ್ರಸ್ತಾವನೆಯಲ್ಲಿ ಯೋಜನೆಗೆ ಅಗತ್ಯವಿರುವ 26.96 ಹೆಕ್ಟೇರ್ ಅರಣ್ಯ ಭೂಮಿ ಬಳಕೆಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಒಪ್ಪಿಗೆ ಕೂಡ ಸೇರಿದೆ ಎನ್ನಲಾಗಿದ್ದು, ಪ್ರಾಧಿಕಾರ ಸರ್ಕಾರದ ಮನವಿಯನ್ನು ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ