ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು 'ಧ್ಯೇಯ ವಾಕ್ಯ' ಬದಲಾವಣೆ, ತಾಲಿಬಾನ್ ಮಾಡೆಲ್ ಜಾರಿಗೆ ಯತ್ನ: ಸರ್ಕಾರದ ವಿರುದ್ದ ಬಿಜೆಪಿ ಕಿಡಿ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿನ 'ಧ್ಯೇಯ ವಾಕ್ಯ' ಬದಲಾವಣೆ ಕುರಿತು ರಾಜ್ಯ ಸರ್ಕಾರದ ತೀವ್ರ ಕಿಡಿಕಾರಿರುವ ಪ್ರತಿಪಕ್ಷ ಬಿಜೆಪಿ, ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು 'ಧ್ಯೇಯ ವಾಕ್ಯ' ಬದಲಾವಣೆ ಮಾಡಲಾಗಿದೆ ಎಂದು ಕಿಡಿಕಾರಿದೆ.
ಸರ್ಕಾರಿ ಶಾಲೆಗಳಲ್ಲಿ 'ಜ್ಞಾನ ದೇಗುಲವಿದು.. ಕೈ ಮುಗಿದು ಒಳಗೆ ಬಾ' ಎಂಬ ಧ್ಯೇಯವಾಕ್ಯವನ್ನು 'ಜ್ಞಾನ ದೇಗುಲವಿದು.. ಧೈರ್ಯವಾಗಿ ಪ್ರಶ್ನಿಸು' ಎಂಬುದಕ್ಕೆ ಬದಲಾಯಿಸಲಾಗಿದೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದೇ ವಿಚಾರವಾಗಿ ಇದೀಗ ರಾಜ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ತೀವ್ರ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಕುವೆಂಪು ಅವರ "ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ" ಎಂಬ ಧ್ಯೇಯ ವಾಕ್ಯವನ್ನು ಕಾಂಗ್ರೆಸ್ ಸರ್ಕಾರ ಬಡ ಶಾಲಾ ಮಕ್ಕಳ ಬ್ರೈನ್ ವಾಶ್ ಮಾಡಲು ಬದಲಾಯಿಸಿದೆ. ಈ ಮೂಲಕ ಹಿಂದುಳಿದ ಬಡ ವಿದ್ಯಾರ್ಥಿಗಳು ಹಿಂದೂ ಸಂಸ್ಕೃತಿ, ಸಂಸ್ಕಾರವನ್ನು ವಿರೋಧಿಸುವಂತೆ ವಿಷ ಬೀಜ ಬಿತ್ತಿ, ಎಡಬಿಡಂಗಿ ಸಿದ್ಧಾಂತವನ್ನು ಹೇರಲಾಗುತ್ತಿದೆ ಎಂದು ಹೇಳಿದೆ.
ಅಲ್ಲದೆ ಸಮಾಜ ಕಲ್ಯಾಣ ಇಲಾಖೆ ಮೂಲಕ ಹಿಂದುಳಿದ, ದಲಿತ ಬಡ ಮಕ್ಕಳಿಗೆ ಮದರಸಾ ಶಿಕ್ಷಣ ನೀಡಿ ಬೀದಿಗೆ ಬಿಟ್ಟು ಪಿಎಫ್ಐ ಗೂಂಡಾಗಳಂತೆ ಕಲ್ಲು ತೂರಿಸಲು ಪ್ರಚೋದನೆ ಕೊಡುವ ಉದ್ದೇಶದ ಮೊದಲ ಹಂತವೇ ಇದು! "ತಾಲಿಬಾನ್ ಮಾಡೆಲ್" ಅನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿದ್ದರಾಮಯ್ಯ ಅವರು ಹಂತ ಹಂತವಾಗಿ ಮುನ್ನುಡಿ ಇಟ್ಟಿದ್ದಾರೆ. ಬಡವರ ಮಕ್ಕಳನ್ನು ಹಳ್ಳಕ್ಕೆ ದೂಡಿ ಮಜಾ ತೆಗೆದುಕೊಳ್ಳುವುದೇ ಮಜಾವಾದಿ ಸರ್ಕಾರದ ಹಿಡನ್ ಅಜೆಂಡಾ! ಎಂದು ಕಿಡಿಕಾರಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ