ಅಪ್ರಾಪ್ತರ ಸಮ್ಮತಿಯ ದೈಹಿಕ ಸಂಬಂಧವನ್ನು ಅಪರಾಧೀಕರಿಸುವುದು ಪೋಕ್ಸೋ ಕಾಯಿದೆ ಉದ್ದೇಶವಲ್ಲ: ಹೈಕೋರ್ಟ್‌

ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದ ನ್ಯಾಯಾಲಯವು ಅಪ್ರಾಪ್ತ ಬಾಲಕಿಯನ್ನು ವರಿಸಿ, ದೈಹಿಕ ಸಂಪರ್ಕ ಬೆಳೆಸಿ ಆಕೆ ಮಗುವಿಗೆ ಜನ್ಮನೀಡಲು ಕಾರಣವಾದ 20ರ ಹರೆಯದ ಯುವಕನ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದ ನ್ಯಾಯಾಲಯವು ಅಪ್ರಾಪ್ತ ಬಾಲಕಿಯನ್ನು ವರಿಸಿ, ದೈಹಿಕ ಸಂಪರ್ಕ ಬೆಳೆಸಿ ಆಕೆ ಮಗುವಿಗೆ ಜನ್ಮನೀಡಲು ಕಾರಣವಾದ 20ರ ಹರೆಯದ ಯುವಕನ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.

ತಮ್ಮ ವಿರುದ್ಧ ಐಪಿಸಿಯ ಸೆಕ್ಷನ್ 366(ಎ), 376(1) ಮತ್ತು ಪೋಕ್ಸೊ ಕಾಯಿದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ ಕಾಯಿದೆ ಅಡಿಯಲ್ಲಿ ಹೊರಿಸಲಾದ ಆರೋಪವನ್ನು ರದ್ದುಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್‌ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಕಾನೂನಿನ ಅರಿವಿಲ್ಲದೇ ಅರ್ಜಿದಾರ ಹಾಗೂ ಮಗಳ ಮದುವೆ ಅನೀರಿಕ್ಷಿತವಾಗಿ ನಡೆದಿದೆ. ಬಳಿಕ ಮಗಳು ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ವಿವಾಹಕ್ಕೆ ಕಾನೂನುಬದ್ಧ ವಯಸ್ಸು ತಲುಪಿದ ಕೂಡಲೇ ದಂಪತಿ ಕಾನೂನಿನ ಅಡಿಯಲ್ಲಿ ವಿವಾಹ ನೋಂದಾಯಿಸಿಕೊಳ್ಳುತ್ತಾರೆ ಎಂದು ಪೀಠದ ಮುಂದೆ ಅಪ್ರಾಪ್ತ ಬಾಲಕಿ ಹಾಗೂ ತಾಯಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿದನ್ನು ನ್ಯಾಯಾಲಯ ಪರಿಗಣಿಸಿದೆ.

ಹುಡುಗಿಯ ಪಾಲಕರು ಆರ್ಥಿಕವಾಗಿ ದುರ್ಬಲರಾಗಿದ್ದು, ತಾಯಿ ಹಾಗೂ ಮಗು ಜೀವನೋಪಾಯಕ್ಕಾಗಿ ಅರ್ಜಿದಾರರ ಮೇಲೆ ಅವಲಂಬಿತಾಗಿರುವುದನ್ನು ಗಮನಿಸಿದ್ದು, ಅರ್ಜಿದಾರರು ನ್ಯಾಯಾಂಗ ಬಂಧನದಲ್ಲಿದ್ದರೆ ಕುಟುಂಬ ಸಂಕಷ್ಟಕ್ಕೀಡಾಗುತ್ತದೆ. ಪತ್ನಿ ಹಾಗೂ ಮಗು ದುಃಖಮಯ ಬದುಕು ಸಾಗಿಸಬೇಕಾಗುತ್ತದೆ. ಇವುಗಳೆಲ್ಲವನ್ನು ಗಣನೆಗೆ ಪಡೆದುಕೊಂಡ ಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.

ಪೋಕ್ಸೊ ಕಾಯಿದೆಯ ಉದ್ದೇಶವು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವುದು. ಪರಿಣಾಮ ಅರಿಯದೆ ಪರಸ್ಪರ ಸಮ್ಮತಿಯಿಂದ ಹರಿಹರೆಯದ ಇಬ್ಬರು ಲೈಂಗಿಕ ಸಂಭೋಗ ನಡೆಸುವುದು ಅಪರಾಧವಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಯುವಕ ಹಾಗೂ ಬಾಲಕಿ ಇಬ್ಬರೂ ಸಮಾಜದ ಆರ್ಥಿಕ ಹಿಂದುಳಿದ ವರ್ಗದಿಂದ ಬಂದವರು. ಹೀಗಾಗಿ ಪ್ರಕರಣ ಸಂಬಂಧ ಪರಿಣಾಮಗಳ ಕುರಿತು ಮಾಹಿತಿಯಿಂದ ವಂಚಿತರಾಗಿದ್ದಾರೆ ಎಂದು ಅರ್ಜಿದಾರರ ಮನವಿಗೆ ಅನುಮತಿ ನೀಡಿ ಬಿಡುಗಡೆ ಮಾಡುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ.

ಸಂಗ್ರಹ ಚಿತ್ರ
ಅಪ್ರಾಪ್ತ ಬಾಲಕನ ಜೊತೆ ಸರಸವಾಡುತ್ತಿದ್ದ ತಂಗಿಯ ಕತ್ತು ಹಿಸುಕಿ ಕೊಂದ ಅಣ್ಣ: ಆತ್ಮಹತ್ಯೆಯ ಕಥೆ ಕಟ್ಟಿದ ತಾಯಿ!

ಅಪ್ರಾಪ್ತ ವಯಸ್ಕರೊಂದಿಗೆ ಸಮ್ಮತಿಯಿಂದ ಲೈಂಗಿಕ ಸಂಭೋಗವು ನಡೆಸುವುದು ಪೋಕ್ಸೊ ಕಾಯಿದೆ ಅಡಿ ಅಪರಾಧವಾಗಿದ್ದರೂ ಪ್ರಕರಣದ ಸತ್ಯ ಮತ್ತು ಸಂದರ್ಭಗಳನ್ನು ಪರಿಗಣಿಸಿ ದೋಷಾರೋಪಾ ಪ್ರಕ್ರಿಯೆ ರದ್ದುಗೊಳಿಸಲಾಗುತ್ತಿದೆ. ಇಲ್ಲವಾದಲ್ಲಿ ಬಾಲಕಿ ಮತ್ತು ಮಗು ನ್ಯಾಯವೈಫಲ್ಯತೆ ಎದುರಿಸಬೇಕಾಗುಬಹುದು ಎಂದು ನ್ಯಾಯಾಲಯ ಹೇಳಿತು.

ಏನಿದು ಪ್ರಕರಣ?

ಆಂಧ್ರ ಪ್ರದೇಶ ಮೂಲದ 20ರ ಹರೆಯದ ಯುವಕ 16 ಹರೆಯದ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಪ್ರಾಪ್ತೆ ವರಿಸಿದ್ದಕ್ಕಾಗಿ ಯುವಕನ ವಿರುದ್ಧ ಐಪಿಸಿ ಸೆಕ್ಷನ್ 366(ಎ), 376(1) ಮತ್ತು ಪೋಕ್ಸೊ ಕಾಯಿದೆ 2012ರ ಸೆಕ್ಷನ್ 4 ಹಾಗೂ 6 ಮತ್ತು 2006ರ ಬಾಲ್ಯ ವಿವಾಹ ಕಾಯಿದೆಯ 9ರ ಅಡಿಯಲ್ಲಿ ಹೊರಿಸಲಾದ ಆರೋಪಗಳನ್ನು ದಾಖಲಿಸಲಾಗಿತ್ತು. ಇದನ್ನು ರದ್ದುಗೊಳಿಸುವಂತೆ ಕೋರಿ ಯುವಕ ಹೈಕೋರ್ಟ್ ಮೇಟ್ಟಿಲೇರಿದ್ದ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com