ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ 300ಕ್ಕೂ ಅಧಿಕ ಡ್ರಿಂಕ್ ಅಂಡ್ ಡ್ರೈವ್ ಕೇಸ್
ಬೆಂಗಳೂರು: ಹೊಸ ವರ್ಷದ ಮುನ್ನಾದಿನದಂದು ಕುಡಿದು ವಾಹನ ಚಲಾಯಿಸಿದ 300 ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೊಸ ವರ್ಷದ ಮುನ್ನಾದಿನದಂದು ಬೆಂಗಳೂರು ಟ್ರಾಫಿಕ್ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಸುಮಾರು 330 ವಾಹನ ಚಾಲಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ನಡೆಸಿದ ವಿಶೇಷ ಅಭಿಯಾನದಲ್ಲಿ 7,620 ಕ್ಕೂ ಹೆಚ್ಚು ವಾಹನಗಳನ್ನು ಪರಿಶೀಲಿಸಿದ್ದು, ತಪಾಸಣೆ ವೇಳೆ 330 ವಾಹನ ಚಾಲಕರು ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅವರ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಹಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಭಾನುವಾರ ಮತ್ತು ಸೋಮವಾರದ ನಡುವೆ ಬೆಂಗಳೂರು ಮತ್ತು ಸುತ್ತಮುತ್ತ 14 ರಸ್ತೆ ಅಪಘಾತಗಳು ವರದಿಯಾಗಿವೆ. ಈ ಕುರಿತು ಪ್ರಕಟಣೆ ನೀಡಿರುವ ಬೆಂಗಳೂರು ಸಂಚಾರ ಪೊಲೀಸರು, "ಡಿಸೆಂಬರ್ 31, 2023 ರಂದು ಮಧ್ಯರಾತ್ರಿಯವರೆಗೆ ಒಟ್ಟು ಒಂದು ಮಾರಣಾಂತಿಕ ಅಪಘಾತ ಮತ್ತು ಹತ್ತು ಮಾರಣಾಂತಿಕವಲ್ಲದ ಅಪಘಾತಗಳು ವರದಿಯಾಗಿವೆ" ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತೆಯೇ, ಜನವರಿ 1, 2024 ರಂದು, ಮಧ್ಯರಾತ್ರಿ ಮತ್ತು ಬೆಳಿಗ್ಗೆ 7:00 ರ ನಡುವೆ, ಒಟ್ಟು ಮೂರು ಮಾರಣಾಂತಿಕ ಅಪಘಾತಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ