ಮಾಲ್‌ ಆಫ್‌ ಏಷ್ಯಾ ಪ್ರಕರಣ: ಮಧ್ಯಂತರ ಆದೇಶ ಜ.5ರವರೆಗೆ ವಿಸ್ತರಿಸಿದ ಹೈಕೋರ್ಟ್

ಮಾಲ್‌ ಆಫ್‌ ಏಷ್ಯಾ ಪ್ರಕರಣ ಸಂಬಂಧ ಡಿಸೆಂಬರ್‌ 31ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಜನವರಿ 5ರವರೆಗೆ ವಿಸ್ತರಿಸಿದೆ,
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾಲ್‌ ಆಫ್‌ ಏಷ್ಯಾ ಪ್ರಕರಣ ಸಂಬಂಧ ಡಿಸೆಂಬರ್‌ 31ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಜನವರಿ 5ರವರೆಗೆ ವಿಸ್ತರಿಸಿದೆ,

ಮಾಲ್‌ ಆಫ್‌ ಏಷ್ಯಾದ ಬಳಿ ಸಂಚಾರ ದಟ್ಟಣೆ ಮತ್ತು ಪರಿಸರ ಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್‌ 31ರಿಂದ ಜನವರಿ 15ರವರೆಗೆ ಮಾಲ್‌ಗೆ ಸಾರ್ವಜನಿಕರ ಪ್ರವೇಶ ಅವಕಾಶ ಕಲ್ಪಿಸಬಾರದು ಎಂದು ಸೂಚಿಸಿ ನಗರದ ಪೊಲೀಸ್‌ ಆಯುಕ್ತರು ಹೊರಡಿಸಿರುವ ಆದೇಶ ಪ್ರಶ್ನಿಸಿ ಫೀನಿಕ್ಸ್‌ ಮಾಲ್‌ ಆಫ್ ಏಷ್ಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿತಾಪಣೆ ವೇಳೆ ಮಾಲ್‌ ಆಫ್‌ ಏಷ್ಯಾದ ಬಳಿ ಸಂಚಾರ ದಟ್ಟಣೆ ಮತ್ತು ಮಾಲಿನ್ಯ ಉಂಟಾಗುತ್ತಿರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ನಗರ ಪೊಲೀಸ್‌ ಆಯುಕ್ತರೊಂದಿಗೆ ಎರಡು ಬಾರಿ ಚರ್ಚೆ ನಡೆಸಲಾಗಿದೆ ಎಂದು ಫೀನಿಕ್ಸ್‌ ಮಾಲ್‌ ಆಫ್‌ ಏಷ್ಯಾ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಅರ್ಜಿದಾರರ ಪರ ಹಿರಿಯ ವಕಿಲ ಧ್ಯಾನ್‌ ಚಿನ್ನಪ್ಪ ಅವರು, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ಪಕ್ಷಕಾರರು (ಅರ್ಜಿದಾರರು ಮತ್ತು ನಗರ ಪೊಲೀಸ್‌ ಆಯುಕ್ತರು) ಜಂಟಿಯಾಗಿ ಸಮಾಲೋಚಿಸಿ ನಿರ್ಣಯಕ್ಕೆ ಬರಬೇಕು ಎಂಬುದಾಗಿ ಕಳೆದ ಡಿಸೆಂಬರ್‌ 31ರಂದು ಹೈಕೋರ್ಟ್‌ ಸೂಚಿಸಿತ್ತು.

ಅದರಂತೆ ನಗರ ಪೊಲೀಸ್‌ ಆಯಕ್ತರೊಂದಿಗೆ ಅರ್ಜಿದಾರರು ಎರಡು ಬಾರಿ ಸಭೆ ನಡೆಸಿ ಸಮಾಲೋಚಿಸಿದ್ದಾರೆ. ಮಾಲ್‌ ಆಫ್‌ ಏಷ್ಯಾದ ಬಳಿ ಸಂಚಾರ ದಟ್ಟಣೆ, ವಾಹನ ನಿಲುಗಡೆ ಸೇರಿ ಇತರೆ ಸಮಸ್ಯೆಗಳ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಮಂಗಳವಾರ ಮಾಲ್‌ಗೆ ನಗರ ಪೊಲೀಸ್‌ ಆಯುಕ್ತರು ಭೇಟಿ ನೀಡಿದ್ದಾರೆ ಎಂದು ವಿವರಿಸಿದರು.

ಈ ಹೇಳಿಕೆ ಪರಿಗಣಿಸಿದ ಪೀಠವು ವಿಚಾರಣೆಯನ್ನು ಜನವರಿ 5ಕ್ಕೆ ಮುಂದೂಡಿತು. ಜೊತೆಗೆ, ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷಕಾರರು ಸಭೆ ನಡೆಸಿ ನಿರ್ಣಯ ಕೈಗೊಳ್ಳುವ ಅಥವಾ ನ್ಯಾಯಾಲಯದ ಮುಂದಿನ ಆದೇಶದವರೆಗೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು ಎಂಬುದಾಗಿ ನಗರ ಪೊಲೀಸ್‌ ಆಯುಕ್ತರಿಗೆ ಸೂಚಿಸಿ ಡಿಸೆಂಬರ್‌ 31ರಂದು ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಜನವರಿ 5ರವರೆಗೆ ವಿಸ್ತರಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com