ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಅಪಮಾನ; ನಂಜನಗೂಡು ಬಂದ್‌ಗೆ ಉತ್ತಮ ಪ್ರತಿಕ್ರಿಯೆ, ಮೆಡಿಕಲ್ ಅಂಗಡಿ ಹೊರತುಪಡಿಸಿ ಎಲ್ಲಾ ವ್ಯಾಪಾರ ಬಂದ್

ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ `ಅಂಧಕಾಸುರನ ಸಂಹಾರ’ ಧಾರ್ಮಿಕ ಕಾರ್ಯಕ್ರಮ ನಡೆಯುವಾಗ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ `ಅಂಧಕಾಸುರನ ಸಂಹಾರ’ ಧಾರ್ಮಿಕ ಕಾರ್ಯಕ್ರಮ ನಡೆಯುವಾಗ ಕೆಲವು ದುಷ್ಕರ್ಮಿಗಳು ಉತ್ಸವ ಮೂರ್ತಿಯ ಮೇಲೆ ಎಂಜಲು ನೀರನ್ನು ಎರಚಿ, ಭಕ್ತರ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದು, ಆರೋಪಿಗಳ ಬಂಧಿಸುವಂತೆ ಆಗ್ರಹಿಸಿ ಗುರುವಾರ ನಂಜನಗೂಡುವಿನಲ್ಲಿ ನಡೆಸಲಾಗುತ್ತಿದ್ದು, ಬಂದ್'ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಮೆಡಿಕಲ್ ಅಂಗಡಿಗಳ ಹೊರತುಪಡಿಸಿ ಎಲ್ಲಾ ವ್ಯಾಪಾರಗಳನ್ನು ಬಂದ್ ಮಾಡಿ, ಬಂದ್'ಗೆ ಜನರು ಉತ್ತಮ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲಿನ ಬೀದಿಗಳಲ್ಲಿ ವ್ಯಾಪಾರ ವಹಿವಾಟು ಆರಂಭವಾಗಿಲ್ಲ. ಬಂದ್‌ಗೆ ಬೆಂಬಲ ಕೊಡುವಂತೆ ನಂಜನಗೂಡಿನಲ್ಲಿ ನಂಜುಂಡೇಶ್ವರನ ಭಕ್ತರು ಕರ ಪತ್ರ ಹಂಚುತ್ತಿದ್ದಾರೆ.

ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ: ತಹಶೀಲ್ದಾರ್
ನಂಜನಗೂಡು ಬಂದ್​ಗೆ ಅನುಮತಿ ನೀಡಿಲ್ಲ ಎಂದು ತಹಶೀಲ್ದಾರ್ ಶಿವಪ್ರಸಾದ್ ಅವರು ಹೇಳಿದ್ದಾರೆ.

ಬಂದ್ ಮಾಡುತ್ತಿರುವ ಬಗ್ಗೆ ಯಾವುದೇ ಮನವಿ ನಮಗೆ ಬಂದಿಲ್ಲ ಹಾಗೂ ನಾವು ಯಾರಿಗೂ ಕೂಡ ಅನುಮತಿಯನ್ನು ಕೂಡ ನೀಡಿಲ್ಲ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ನಂಜನಗೂಡು ಬಂದ್​ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೂಡ ಮಧ್ಯಾಹ್ನ ದೇವಸ್ಥಾನದ ಭಕ್ತರು, ವರ್ತಕರು ಹಾಗೂ ವಿವಿಧ ಸಂಘಟನೆಯ ಮುಖಂಡರೊಂದಿಗೆ ನಿನ್ನೆ ಶಾಂತಿ ಸಭೆ ನಡೆಸಿದರು.

ಬಂದ್ ಕರೆ ನೀಡಿರುವುದರಿಂದ ಜನರಿಗೆ ತೊಂದರೆ ಆಗಲಿದ್ದು, ಬಂದ್ ನಡೆಸದಂತೆ ಶಾಸಕರು ಮನವಿ ಮಾಡಿದರು. ಆದರೇ ದೇವಸ್ಥಾನದ ಭಕ್ತರು ಆರೋಪಿಗಳನ್ನು ಬಂಧಿಸಿ, ಇಲ್ಲವೆಂದರೆ ಬಂದ್ ನಡೆಸುತ್ತೇವೆ ಎಂದು ಪಟ್ಟು ಹಿಡಿದರು. ಹೀಗಾಗಿ ಶಾಂತಿ ಸಭೆ ವಿಫಲಗೊಂಡಿತ್ತು.

ಏನಿದು ಪ್ರಕರಣ?
ಮಹಿಷಾಸುರ ವಧೆ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ಆವರಣದಲ್ಲಿ ಸಂಪ್ರದಾಯದಂತೆ ಪಟ್ಟಣದ ರಾಕ್ಷಸ ಮಂಟಪದಲ್ಲಿ ಮಹಿಷಾಸುರ ಬೃಹತ್ ರಂಗೋಲಿ ಬರೆದು, ಬೃಹದಾಕಾರದ ಬ್ಯಾನರ್ ಕಟ್ಟಲಾಗಿತ್ತು.

ಪದ್ಧತಿಯಂತೆ ನಂಜುಂಡೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತವರು ಮಹಿಷಾಸುರನ ರಂಗೂಲಿಯ ಸುತ್ತ ಮೂರು ಸುತ್ತು ಸುತ್ತುಗಳನ್ನು ಹಾಕಿ ರಂಗೋಲಿಯನ್ನು ಅಳಿಸಿ, ಬ್ಯಾನರನ್ನು ಕಿತ್ತೆಸೆದು ತೇರಿನ ಬೀದಿಗಳಲ್ಲಿ ಮುಂದಕ್ಕೆ ಸಾಗಬೇಕು. ಇದು ಹತ್ತಾರು ವರ್ಷಗಳಿಂದ ನಡೆದುಕೊಂಡ ಬಂದ ವಾಡಿಕೆಯಾಗಿತ್ತು.

ಮಹಿಷಾಸುರ ಸಂಹಾರಕ್ಕೆ ದಲಿತ ಸಂಘರ್ಷ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. ಮಹಿಷಾಸುರನನ್ನು ರಾಜನೆಂದು ಪೂಜಿಸುತ್ತೇವೆ. ಈ ಆಚರಣೆ ನಿಲ್ಲಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಭಕ್ತರು, ತಲಾತಲಾಂತರಗಳಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ವಿವರಿಸಿದ್ದರು. ಆದರೂ ಮೆರವಣಿಗೆ ಬಂದ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ನೀರನ್ನು ಉತ್ಸವ ಮೂರ್ತಿ ಮೇಲೆ ಎರಚಿದ್ದರು.

ನಂಜನಗೂಡು ಅಂಧಕಾಸುರ ಆಚರಣೆಗೆ ಅಡ್ಡಿಪಡಿಸಿದ ವಿಚಾರದ ಕುರಿತು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಅವರು, ಬಾಲರಾಜು, ನಾರಾಯಣ, ನಾಗಭೂಷಣ್, ನಟೇಶ್ ಹಾಗೂ ಅಭಿ ಈ ಐವರ ಮೇಲೆ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com