ಬೆಂಗಳೂರು: ಸಿಬ್ಬಂದಿಗೆ ಲೈಂಗಿಕ ಕಿರುಕುಳ; ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜಿನ ಇಬ್ಬರು ವೈದ್ಯರ ವಿರುದ್ಧ ತನಿಖೆ

ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಬ್ಬರು ವೈದ್ಯರು ಆಸ್ಪತ್ರೆಯ ಏಳು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಇಬ್ಬರು ವೈದ್ಯರು ಆಸ್ಪತ್ರೆಯ ಏಳು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಸಂತ್ರಸ್ತೆಯರು, ವೈದ್ಯಕೀಯ ಅಧೀಕ್ಷಕ ಡಾ.ಕೆಂಪರಾಜ್ ಮತ್ತು ಪಿಆರ್‌ಒ ಡಾ.ಶ್ರೀಕಾಂತ್ ವಿರುದ್ಧ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ, ಇಬ್ಬರೂ ತಮಗೆ ಹಲವಾರು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಇಬ್ಬರು  ವೈದ್ಯರು ಆಸ್ಪತ್ರೆಯ ಮಹಿಳಾ ವೈದ್ಯರು, ನರ್ಸ್‌ಗಳು ಮತ್ತು ಇತರ ಉದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಡಾ.ಕೆಂಪರಾಜ್ ಮತ್ತು ಡಾ.ಶ್ರೀಕಾಂತ್‌ಗೆ ಕೆಲವು ಪ್ರಭಾವಿ ಮತ್ತು ಪ್ರಬಲ ರಾಜಕಾರಣಿಗಳ ಬೆಂಬಲವಿದ್ದ ಕಾರಣ ಸಂತ್ರಸ್ತರು ಅವರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ದೂರಿದ್ದಾರೆ.

ಇನ್ನೂ ಈ ಸಂಬಂಧ ಇಬ್ಬರು ವೈದ್ಯರ ವಿರುದ್ಧದ ಆರೋಪಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ ಸುಜಾತಾ ರಾಥೋಡ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಈ ಸಂಬಂಧ ಅಕ್ಟೋಬರ್ 1, 2023 ರಂದು ದೂರು ನೀಡಲಾಗಿದೆ. ಸಮಿತಿಯು ಆರಂಭದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (BMCRI) ಪ್ರಾಂಶುಪಾಲರಾದ ಡಾ ಅಸಿಮಾ ಬಾನು ಸೇರಿದಂತೆ ಮೂವರು ಸದಸ್ಯರನ್ನು ಹೊಂದಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ, ಡಾ.ಅಸಿಮಾ ಬದಲಿಗೆ ಮತ್ತೊಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.

ಸಮಿತಿ ರಚನೆಯಾದಾಗ ಒಂದೇ ಸಂಸ್ಥೆಯ ಇಬ್ಬರು ಅಧಿಕಾರಿಗಳಿದ್ದರು ಎಂದು ಡಾ. ಸುಜಾತಾ ರಾಥೋಡ್ ಸ್ಪಷ್ಟಪಡಿಸಿದ್ದಾರೆ.  ಇದರಿಂದ ಉಂಟಾಗಬಹುದಾದ ವಿವಾದ ತಪ್ಪಿಸಲು, ಒಬ್ಬ ಸದಸ್ಯರನ್ನು (ಡಾ ಅಸಿಮಾ) ಸಮಿತಿಯಿಂದ ಕೈಬಿಡಲಾಯಿತು. ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರನ್ನು ಸಮಿತಿಗೆ ಸೇರಿಸಲಾಯಿತು. ಸಮಿತಿಯಲ್ಲಿ ಈಗ ಒಬ್ಬ ಮಹಿಳಾ ಸದಸ್ಯರಿದ್ದಾರೆ ಎಂದು ಅವರು ಹೇಳಿದರು.

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ವೈದ್ಯಾಧಿಕಾರಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಬಿಎಂಸಿಆರ್‌ಐನ ಹಿರಿಯ ಅಧಿಕಾರಿಯನ್ನು ಒಳಗೊಂಡ ಸಮಿತಿಯು ತನಿಖೆ ನಡೆಸಿ, ಹೇಳಿಕೆಗಳನ್ನು ದಾಖಲಿಸಿ ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಸಮಿತಿ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸುಜಾತಾ ರಾಥೋಡ್ ಎಂದು ತಿಳಿಸಿದ್ದಾರೆ.

ಇನ್ನೂ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಡಾ. ಶ್ರೀಕಾಂತ್, ತಮ್ಮ ವಿರುದ್ಧದ ದೂರಿನ ಬಗ್ಗೆ ನನಗೆ ಮಾಹಿತಿಯಿಲ್ಲ, ನನ್ನ ವಿರುದ್ಧದ ಆರೋಪಗಳು ಸುಳ್ಳು ಮತ್ತು ಆಧಾರರಹಿತ ಎಂದು ಹೇಳಿದ್ದಾರೆ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಸ್ಪತ್ರೆ ಸಿಬ್ಬಂದಿಯನ್ನು ಬಳಸಿಕೊಂಡು ದೂರು ದಾಖಲಿಸಿರಬಹುದು. ದೂರು ನೀಡುವ ಮೂಲಕ  ನನ್ನ  ವ್ಯಕ್ತಿತ್ವಕ್ಕೆ ಧಕ್ಕೆತರಲು  ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಸ್ಪತ್ರೆಯ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ನಿರ್ಮಿಸುವ ಪ್ರಸ್ತಾವನೆ ಇದ್ದು, ಅನೇಕರು ಉನ್ನತ ಹುದ್ದೆಗಳ ರೇಸ್‌ನಲ್ಲಿದ್ದಾರೆ.  ಡಾ.ಕೆಂಪರಾಜ್ ವಿರುದ್ಧದ ದೂರಿನ ಹಿಂದೆ ಅವರ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com