ನಕಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಪತ್ತೆ; 2 ಕೋಟಿ ರೂ. ಮೌಲ್ಯದ ಸಾಮಗ್ರಿ ವಶಕ್ಕೆ

ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಾಬೂನನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಹೈದರಾಬಾದ್'ನಲ್ಲಿ ಭೇದಿಸಲಾಗಿದೆ.
ನಕಲಿ ಮೈಸೂರು ಸ್ಯಾಂಡಲ್ ಸೋಪಿನ ರಾಶಿ.
ನಕಲಿ ಮೈಸೂರು ಸ್ಯಾಂಡಲ್ ಸೋಪಿನ ರಾಶಿ.

ಬೆಂಗಳೂರು: ಕರ್ನಾಟಕ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಾಬೂನನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಹೈದರಾಬಾದ್'ನಲ್ಲಿ ಭೇದಿಸಲಾಗಿದೆ.

ಈ ಕಾರ್ಯಾಚರಣೆ ವೇಳೆ ನಕಲಿ ಉತ್ಪನ್ನ, ಅದರ ಪ್ಯಾಕಿಂಗ್ ಗೆ ಬಳಸುತ್ತಿದ್ದ ಬಾಕ್ಸ್ ಗಳು ಸೇರಿದಂತೆ ಸುಮಾರು ರೂ 2 ಕೋಟಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಹೈದರಾಬಾದ್ ಮೂಲದ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವವರನ್ನು ಬಂಧನಕ್ಕೊಳಪಡಿಸಲಾಗಿದೆ.

ನಕಲಿ ಮೈಸೂರ್ ಸ್ಯಾಂಡಲ್ ಸಾಬೂನು ಹೈದರಾಬಾದ್ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಬಗ್ಗೆ ಕೆ ಎಸ್ ಡಿ ಎಲ್ ಅಧ್ಯಕ್ಷರೂ ಆದ ಸಚಿವ ಎಂ.ಬಿ ಪಾಟೀಲ್ ಅವರಿಗೆ‌ ಅನಾಮಧೇಯ ಕರೆ ಬಂದಿತ್ತು.

ಬಳಿಕೆ ಸಚಿವರು ಇದರ ಮೇಲೆ ನಿಗಾ ಇಡುವಂತೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಅವರಿಗೆ ಸೂಚಿಸಿದ್ದರು. ಅದರಂತೆ, ಸಿಕಂದರಾಬಾದಿನಲ್ಲಿರುವ ಸಂಸ್ಥೆಯ ಅಧಿಕೃತ ಮಾರಾಟ ಕಚೇರಿಯ ಸಿಬ್ಬಂದಿ ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದರು. ಈ ವೇಳೆ ಹೈದರಾಬಾದಿನ ಕೆಲವು ಪ್ರದೇಶಗಳಲ್ಲಿ ನಕಲಿ ಸಾಬೂನು ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ, ಪೂರೈಕೆದಾರರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ.

ಬಳಿಕ ಕೆಎಸ್'ಡಿಎಲ್ ಸಿಬ್ಬಂದಿ ಸ್ವತಃ ಒಂದು ಲಕ್ಷ ರೂಪಾಯಿ ಬೆಲೆಯ ಉತ್ಪನ್ನ ಖರೀದಿಸಿ, ಮೂಲ ಪತ್ತೆಗೆ ಮುಂದಾಗಿದ್ದರು.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣ ಕೊಟ್ಟು 25 ಲಕ್ಷ ರೂಪಾಯಿ ಬೆಲೆಯ ಸೋಪು ಖರೀದಿಗೆ ಆರ್ಡರ್ ಕೊಟ್ಟಿದ್ದರು. ಅದನ್ನು ಸ್ವತಃ ತಾವೇ ವಾಹನದಲ್ಲಿ ಸಾಗಿಸುವ ನೆಪದಲ್ಲಿ  ಉತ್ಪಾದನೆ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ್ದರು. ಹೀಗೆ ಕಾರ್ಯಾಚರಣೆ ನಡೆಸಿದಾಗ ನಕಲಿ ಉತ್ಪಾದನಾ ಘಟಕ ಪತ್ತೆಯಾಗಿದೆ ಎಂದು ಕೆಎಸ್'ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಅವರು ಮಾಹಿತಿ ನೀಡಿದ್ದಾರೆ.

ಉತ್ಪಾದನಾ ಘಟಕದಲ್ಲಿ ತಲಾ 150 ಗ್ರಾಂ ತೂಕದ 3 ಸಾಬೂನುಗಳಿರುವ 20 ಬಾಕ್ಸ್ ಗಳು (ಪ್ರತಿಯೊಂದು ಬಾಕ್ಸ್ ನಲ್ಲಿ 90ರಂತೆ ಒಟ್ಟು 1800 ಪೀಸ್ ಗಳು), ತಲಾ 75 ಗ್ರಾಂ ನ 47 ಬಾಕ್ಸ್ ಗಳು (9400 ಪೀಸ್ ಗಳು), 150 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಖಾಲಿ ಬಾಕ್ಸ್ ಗಳು ಮತ್ತು 75 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಬಾಕ್ಸ್ ಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com