
ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಹಿರಂಡಹಳ್ಳಿ ಗ್ರಾಮದಲ್ಲಿರುವ ಶ್ರೀರಾಮ ಮಂದಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಉದ್ಘಾಟಿಸಿದರು.
ಬಿದರಹಳ್ಳಿ ಹೋಬಳಿಯ, ಹಿರಂಡಹಳ್ಳಿ ಶ್ರೀರಾಮ ಟೆಂಪಲ್ ಟ್ರಸ್ಟ್ ದೇವಾಲಯವನ್ನು ನಿರ್ಮಿಸಿದ್ದು, ಇಂದು ಸಕುಟುಂಬ ಸಮೇತರಾಗಿ ಮುಖ್ಯಮಂತ್ರಿಗಳು ಸೀತಾರಾಮ ಲಕ್ಷ್ಮಣ ದೇವಾಲಯ ಹಾಗೂ 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಮಹಾ ಕುಂಭಾಭಿಷೇಕದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ, ರಾಮಲಿಂಗರೆಡ್ಡಿ ಮತ್ತು ಶಾಸಕಿ ಮಂಜುಳಾ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗಿಯಾಗಿದ್ದರು.
ದೇವಾಲಯ ಉದ್ಘಾಟನೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗಾಂಧೀಜಿ ಪ್ರಾಣ ಬಿಡುವಾಗಲೂ ಹೇ ರಾಮ್ ಎಂದು ಪ್ರಾಣ ಬಿಟ್ಟರು. ನಾವು ಗಾಂಧಿಜಿಯವರ ರಾಮನನ್ನು ಪೂಜಿಸುತ್ತೇವೆ. ಬಿಜೆಪಿಯ ರಾಮನನ್ನು ಪೂಜಿಸಲ್ಲ. ನಾವೆಲ್ಲ ರಾಮನ ಭಕ್ತರೆ, ಆದರೆ, ಬಿಜೆಪಿಯವರು ಹೇಳುವಂತೆ ಅಲ್ಲ. ಅಯೋಧ್ಯೆಗೆ ಹೋಗುತ್ತೇವೆ ಎಂದು ಹೇಳಿದರು.
ಈ ದೇವಾಲಯ ರಾಜಕಾರಣಕ್ಕೊಸ್ಕರ ಮಾಡಿಲ್ಲ, ರಾಜ್ಯದಲ್ಲಿ ಬಹಳಷ್ಟು ರಾಮನ ದೇವಾಲಯ ಇದೆ. ನಾನು ರಾಮನ ದೇವಸ್ಥಾನ ಕಟ್ಟಿಸಿದ್ದೇನೆ. ನಾನೂ ಅಯೋಧ್ಯೆಗೇ ಹೋಗುತ್ತೇನೆ. ಆದರೆ, ಎಲ್ಲಾ ಕಡೆ ರಾಮನ ಮೂರ್ತಿ ಒಂದೇ ಅಲ್ವಾ? ಅಯೋಧ್ಯೆಯಲ್ಲಿ ಪೂಜೆ ಮಾಡಿದರು ಒಂದೇ, ನಮ್ಮೂರಿನಲ್ಲಿ ಪೂಜೆ ಮಾಡಿದರು ಒಂದೆ ಎಂದು ತಿಳಿಸಿದರು.
ಅಯೋಧ್ಯೆಯ ದೇಗುಲದಲ್ಲಿ ಶ್ರೀರಾಮನ ಏಕೈಕ ವಿಗ್ರಹವನ್ನು ಸ್ಥಾಪಿಸುವ ಮೂಲಕ ಬಿಜೆಪಿಯು ರಾಮನನ್ನು ಲಕ್ಷ್ಮಣ, ಸೀತೆ ಮತ್ತು ಆಂಜನೇಯರಿಂದ ಬೇರ್ಪಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು. ಲಕ್ಷ್ಮಣ, ಸೀತೆ, ಆಂಜನೇಯ ಇಲ್ಲದೇ ರಾಮ ಪೂರ್ಣವಾಗಲು ಸಾಧ್ಯವಿಲ್ಲ, ಅವರು (ಬಿಜೆಪಿ) ರಾಮನನ್ನು ಬೇರ್ಪಡಿಸುತ್ತಿದ್ದಾರೆ, ಇದು ಸರಿಯಲ್ಲ ಎಂದರು.
Advertisement