ಹಿರೇಮಗಳೂರು ಕಣ್ಣನ್‌ ರಿಂದ ಹಣ ವಾಪಸ್ ಪಡೆಯಲ್ಲ, ಇದು ತಹಶೀಲ್ದಾರ್ ತಪ್ಪು..: ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಪಾವತಿಸಿರುವ ತಸ್ತೀಕ್ ಹಣ ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಹಣ ಹಿಂದಿರುಗಿಸುವಂತೆ ಕನ್ನಡದ ಪೂಜಾರಿ ಎಂದು ಪ್ರಸಿದ್ಧವಾಗಿರುವ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿದ್ದು, ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಹಿರೇಮಗಳೂರು ಕಣ್ಣನ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ
ಹಿರೇಮಗಳೂರು ಕಣ್ಣನ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ

ಬೆಂಗಳೂರು: ಪಾವತಿಸಿರುವ ತಸ್ತೀಕ್ ಹಣ ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆ ಹಣ ಹಿಂದಿರುಗಿಸುವಂತೆ ಕನ್ನಡದ ಪೂಜಾರಿ ಎಂದು ಪ್ರಸಿದ್ಧವಾಗಿರುವ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿದ್ದು, ಈ ಕುರಿತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ದೇವಾಲಯದ ಆದಾಯಕ್ಕಿಂತ ಹೆಚ್ಚಿದೆ ಎಂಬ ಕಾರಣಕ್ಕೆಸುಮಾರು 4.75 ಲಕ್ಷ ರೂ ಹಣವನ್ನು ಹಿಂದಿರುಗಿಸುವಂತೆ ಹಿರೇಮಗಳೂರು ಕಣ್ಣನ್ ಅವರಿಗೆ ಮುಜರಾಯಿ ಇಲಾಖೆ ನೋಟಿಸ್ ನೀಡಿದೆ. ‘ಹಿರೇಮಗಳೂರು ಕೋದಂಡ ರಾಮಚಂದ್ರ ದೇಗುಲಕ್ಕೆ 2013-14ನೇ ಸಾಲಿನಿಂದ ಈವರೆಗೆ 5.10 ಲಕ್ಷ ಸಂಗ್ರಹವಾಗಿದೆ. ಅದೇ ಅವಧಿಯಲ್ಲಿ ತಮಗೆ ತಸ್ತೀಕ್ ಮೊತ್ತವಾಗಿ ಒಟ್ಟು 8.10 ಲಕ್ಷ ಪಾವತಿಸಲಾಗಿದೆ‌. ದೇವಾಲಯದ ವಾರ್ಷಿಕ ಆದಾಯಕ್ಕಿಂತ ವೆಚ್ಚ ಜಾಸ್ತಿ ಇದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಮೊತ್ತಕ್ಕಿಂತ ಹೆಚ್ಚುವರಿ ತಮ್ಮ ಖಾತೆಗೆ ಜಮಾ ಮಾಡಲಾಗಿದೆ. ಆದ್ದರಿಂದ ಬಾಕಿ 4.74 ಲಕ್ಷ ಹಿಂದಿರುಗಿಸಬೇಕು’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಸಚಿವರ ಸ್ಪಷ್ಟನೆ
ಇನ್ನು ಈ ವಿಚಾರ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, 'ಹಿರೇಮಗಳೂರು ಕಣ್ಣನ್‌ ಅವರು ನೋಟಿಸ್ ನಿಂದ ದೃತಿಗೆಡುವುದು ಬೇಡ.. ಇದು ತಹಶೀಲ್ದಾರ್ ತಪ್ಪು.. ಹೀಗಾಗಿ ಅವರೇ ಹಣ ಪಾವತಿಸಿ ಅಂತ ನೋಟಿಸ್ ನೀಡುತ್ತೇವೆ. ಸ್ಥಳಿಯ ತಹಶೀಲ್ದಾರ್ 90 ಸಾವಿರ ಹಣ ಪಾವತಿಸಿ ಸಮಸ್ಯೆ ಸೃಷ್ಟಿಸಿದ್ದಾರೆ. ಬೇರೆ ಯಾವುದೇ ಮುಜರಾಯಿ ದೇಗುಲದಲ್ಲಿ ಈ ಸಮಸ್ಯೆ ಆಗಿಲ್ಲ. ಹೀಗಾಗಿ ಸ್ಥಳೀಯ ತಹಶೀಲ್ದಾರ್ ಗೆ ಹಣ ಪಾವತಿಸುವಂತೆ ನೋಟಿಸ್ ನೀಡುತ್ತೇವೆ. ಈ ಸಮಸ್ಯೆಯನ್ನು ನಾನು ಕೂಡಲೇ ಬಗೆಹರಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಕಿಡಿ
ಇನ್ನು ಸರ್ಕಾರದ ನಡೆಯನ್ನುತೀವ್ರ ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿ ನಡೆದಿದೆ ಎಂದು ಕಿಡಿಕಾರಿದೆ.

ಅಲ್ಲದೆ ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ಕಾಂಗ್ರೆಸ್ ಸರ್ಕಾರದ ಆಡಳಿತ ತುಘಲಕ್ ಹಾದಿಯಲ್ಲಿ ನಡೆದಿದೆ, ಹಿಂದೂ ಧರ್ಮಿಯರ ಧಾರ್ಮಿಕ ಕ್ಷೇತ್ರದಲ್ಲಿಯೂ ಆದಾಯ ಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು ಹಿರೇಮಗಳೂರು ಕಣ್ಣನ್ ಅವರಂತಹ ನಾಡಿನ ಶ್ರೇಷ್ಠ ಕನ್ನಡ ವಿದ್ವಾಂಸ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶಕರಿಗೆ ನೋಟಿಸ್ ನೀಡಿರುವ ಕ್ರಮ ಅತ್ಯಂತ ಹಾಸ್ಯಾಸ್ಪದ ಹಾಗೂ ಖಂಡನೀಯ.  

ಹಿಂದೂ ಆಚಾರ-ವಿಚಾರ ಹಾಗೂ ಧಾರ್ಮಿಕ ಕೇಂದ್ರಗಳನ್ನೇ ಗುರಿಯನ್ನಾಗಿಸಿಕೊಂಡು ಕಾಂಗ್ರೆಸ್ ಸರ್ಕಾರ ಆಗಾಗ ಸರಣೀ ರೂಪದಲ್ಲಿ ಜನರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಧರ್ಮನಿಷ್ಠರ ಸಹನೆಯನ್ನು ಕೆಣಕುವಂತಿದೆ.  ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಅನ್ನು ಈ ಕೂಡಲೇ ಬೇಷರತ್ ಕ್ಷಮೆ ಯಾಚಿಸಿ ಸರ್ಕಾರ ವಾಪಸ್ ಪಡೆಯಬೇಕು, ಇಂಥಾ ಅಸಂಬದ್ಧ ನೋಟಿಸ್ ನೀಡಿದ ಅವಿವೇಕಿ ಅಧಿಕಾರಿಯನ್ನು ಕೂಡಲೇ ಅಮಾನತ್ತಿನಲ್ಲಿಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com